ಹೋರಿಯ ಕಾಲು ಕಡಿದು ಕ್ರೌರ್ಯ ಮೆರೆದ ದುಷ್ಕರ್ಮಿಗಳು
ಸುಳ್ಯ: ದುಷ್ಕರ್ಮಿಗಳು ಹೋರಿಯೊಂದರ ಕಾಲನ್ನು ಕಡಿದಿದ್ದಲ್ಲದೆ, ದೇಹದ ಮೇಲೆಲ್ಲ ಆಯುಧಗಳಿಂದ ಕಡಿದು ಗಾಯಗೊಳಿಸಿ ವಿಕೃತಿ ಮೆರೆದ ಘಟನೆ ಸುಳ್ಯ ಗಾಂಧೀನಗರದಲ್ಲಿ ನಡೆದಿದೆ.
ಹರಿತವಾದ ಆಯುಧದಿಂದ ಯದ್ವಾತದ್ವಾ ಕಡಿದ ಪರಿಣಾಮ ಗಂಭೀರ ಗಾಯಗೊಂಡಿರುವ ಹೋರಿಯ ಆಕ್ರಂದನ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿತ್ತು. ಸುಮಾರು ಆರು ವರ್ಷ ಪ್ರಾಯದ ಹೋರಿಯ ಎಡಕಾಲನ್ನು ಕಡಿದು ಗಂಭೀರ ಗಾಯಗೊಳಿಸಲಾಗಿದೆ. ಅಲ್ಲದೆ ಬೆನ್ನು, ಹೊಟ್ಟೆಯ ಮೇಲೂ ಕಡಿದು ಗಾಯಗೊಳಿಸಲಾಗಿದೆ. ಹೋರಿಗೆ ಸರಿಯಾಗಿ ನಿಲ್ಲಲು, ನಡೆಯಲೂ ಆಗದೆ ನರಳಾಡುವಂತಾಗಿದೆ. ಗಾಂಧೀನಗರ ಶಾಲಾ ವಠಾರದಲ್ಲಿ ಹೋರಿಯು ಬಿದ್ದು ನರಳಾಡುತ್ತಿರುವುದು ಕಂಡು ಹಿಂದೂ ಸಂಘಟನೆಯ ಯುವಕರು ಮತ್ತು ಸಾರ್ವಜನಿಕರು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತುಂಡಾಗಿ ನೇತಾಡುತ್ತಿರುವ ಕಾಲಿಗೆ ಔಷಧಿ ಇಟ್ಟು ಕಟ್ಟಿ ಚಿಕಿತ್ಸೆ ನೀಡಲಾಗಿದೆ. ಆದರೆ ನೋವು ತಾಳಲಾರದೆ ಮಲಗಲೂ, ನಿಲ್ಲಲೂ ಆಗದೆ ಆಹಾರವನ್ನೂ ತಿನ್ನದೆ ಹೋರಿಯು ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಾಧಿಕಾರಿ ಗಾಯಗಳಿಗೆ ಬ್ಯಾಂಡೇಜ್ ಮಾಡಿ ಚಿಕಿತ್ಸೆ ನೀಡಿದ್ದಾರೆ. ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿ ಚಿಕಿತ್ಸೆ ಮತ್ತು ಆಹಾರವನ್ನು ನೀಡಲಾಗುತ್ತಿದೆ. ತುಂಡಾಗಿ ನೇತಾಡುತ್ತಿರುವ ಕಾಲು ಸರಿಪಡಿಸಲು ಎರಡು ತಿಂಗಳ ಕಾಲ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
No comments