Breaking News

400ಕ್ಕೂ ಅಧಿಕ ಶೌಚಾಲಯ ನಿರ್ಮಿಸಿದ ಭವ್ಯಾರಾಣಿ


ಇಂದಿಗೂ ಬಯಲು ಪ್ರದೇಶವನ್ನು ಶೌಚಾಲಯವನ್ನಾಗಿಸಿಕೊಂಡ ಅದೆಷ್ಟೋ ಗ್ರಾಮಗಳು ನಮ್ಮ ರಾಜ್ಯದಲ್ಲಿವೆ. ಈ ನಿಟ್ಟಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡದೇ ದೂರವೇ ಉಳಿದಿದ್ದ ಗ್ರಾಮೀಣ ಭಾಗಕ್ಕೆ ತೆರಳಿ ಪ್ರತಿ ಮನೆ ಮನೆಯಲ್ಲೂ ಶೌಚಾಲಯ ನಿರ್ಮಾಣದ ಮೂಲಕ ಕ್ರಾಂತಿಯನ್ನೇ ಎಬ್ಬಿಸಿದಾಕೆ ಈ ಕರಾವಳಿ ಯುವತಿ. ಇವರ ಹೆಸರು ಭವ್ಯಾ ರಾಣಿ. ಬಂಟ್ವಾಳ ತಾಲೂಕಿನ ಅನಂತಾಡಿಯವರು. ಆದರೆ ಸಮಾಜ ಸೇವೆಗಾಗಿ ಇವರು ಆಯ್ಕೆ ಮಾಡಿಕೊಂಡಿದ್ದು ತುಮಕೂರಿನ ತರವೇಕೆರೆಯ ಶೆಟ್ಟಿಗೊಂಡನಹಳ್ಳಿಯನ್ನು.
ಸಮಾಜ ಸೇವೆ ಶಿಕ್ಷಣವನ್ನು ಮುಗಿಸಿದ ಬಳಿಕ ಬೆಂಗಳೂರಿನಲ್ಲಿ ಕೈತುಂಬಾ ಸಂಬಳ ಸಿಗುವ ನೌಕರಿ ಇದ್ದರೂ ಅದನ್ನು ತೊರೆದು ಸಮಾಜ ಸೇವೆಗಾಗಿ ಹಳ್ಳಿಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿದರು. ಅತ್ತ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದರೆ, ಇತ್ತ ಭವ್ಯಾರಾಣಿ ಗ್ರಾಮೀಣ ಭಾಗದಲ್ಲಿ ಮೋದಿ ಕನಸಿಗೆ ಕೆಲಸ ಮಾಡುತ್ತಾ ಸಾಥ್ ನೀಡಿದ್ದಾರೆ.
ಅದೊಂದು ದಿನ ತಮ್ಮ ಸಹಪಾಠಿಯ ಮದುವೆ ಕಾರ್ಯಕ್ರಮದ ನಿಮಿತ್ತ ಶೆಟ್ಟಿಗೊಂಡನಹಳ್ಳಿಗೆ ತೆರಳಿದ ಭವ್ಯಾರಾಣಿ ಅಲ್ಲಿನ ಶೌಚಾಲಯದ ಸ್ಥಿತಿಯನ್ನು ಕಂಡು ಇಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಅವರು ಬೆಂಗಳೂರಿನ ಕೆಲಸವನ್ನೂ ಬಿಟ್ಟು ಶೆಟ್ಟಿಗೊಂಡನಹಳ್ಳಿಯಲ್ಲೇ ವಾಸಮಾಡತೊಡಗಿದರು. ತನ್ನಲ್ಲಿದ್ದ 2 ಲಕ್ಷ ರೂ.ಗಳನ್ನು ಖರ್ಚು ಮಾಡಿ ಗ್ರಾಮೀಣ ಭಾಗದ ಜನರ ಒಲವು ಗಳಿಸಿಕೊಂಡು ಪ್ರತಿ ಮನೆ ಮನೆಯಲ್ಲೂ ಶೌಚಾಲಯ ನಿರ್ಮಾಣದ ಪಣತೊಟ್ಟರು. ಈಗಾಗಲೇ ಇವರು ಸುಮಾರು 100ಕ್ಕೂ ಅಧಿಕ ಶೌಚಾಲಯವನ್ನು ತನ್ನದೇ ಖರ್ಚಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಅಡಿಯಲ್ಲಿ ಸಿಗುವ ಸರಕಾರದ ನೆರವನ್ನೂ ಬಳಸಿಕೊಂಡು ಇದೀಗ ಅವರು ಈ ಹಳ್ಳಿಯಲ್ಲಿ ಸ್ವಚ್ಛತೆಯ ಕ್ರಾಂತಿಯನ್ನೇ ಮೂಡಿಸಿದ್ದಾರೆ.
“ನನ್ನ ದೇಶಕ್ಕೆ ಏನಾದರೂ ಮಾಡಬೇಕೆಂಬ ತುಡಿತ ನನ್ನಲ್ಲಿದೆ. ಎಷ್ಟೇ ಕಷ್ಟವಾದರೂ ತೊಂದರೆ ಇಲ್ಲ. ಸ್ವಚ್ಛ ಭಾರತದ ಕನಸಿಗೆ ನನ್ನ ಶ್ರಮ ಯಾವತ್ತೂ ಇದೆ. ನನ್ನ ಜೀವನದಲ್ಲಿ ಒಂದು ಇಂಚಾದರೂ ಈ ದೇಶವನ್ನು ಮೇಲಕ್ಕೆತ್ತುವ ಆಸೆ ನನಗೆ ಇದೆ” ಎನ್ನುತ್ತಾರೆ ಭವ್ಯಾರಾಣಿ.
ಕಳೆದ 5 ವರ್ಷಗಳಿಂದ ಗ್ರಾಮದಲ್ಲೇ ವಾಸ್ತವ್ಯ ಮಾಡಿಕೊಂಡಿರುವ ಭವ್ಯಾರಾಣಿ ಇದುವರೆಗೆ ಸುಮಾರು 400ಕ್ಕೂ ಅಧಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಇವರ ಕೆಲಸವನ್ನು ಕಂಡು ಸ್ಥಳೀಯ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತ್ ಕೂಡಾ ಸಹಕಾರ ನೀಡಿದೆ. ಅಲ್ಲಿನ ಮಂದಿಗೆ ಈಕೆ ಇದೀಗ ಮನೆಮಗಳಾಗಿದ್ದಾರೆ. ಇಲ್ಲಿ ಏನೇ ಶುಭ ಸಮಾರಂಭವಿದ್ದರೂ ಈಕೆ ಇಲ್ಲದೇ ಅಲ್ಲಿ ಕಾರ್ಯಕ್ರಮ ನಡೆಯಲ್ಲ.
ಈ ಗ್ರಾಮದಲ್ಲಿ 1243 ಮನೆಗಳಿವೆ. ಈಗಾಗಲೇ ಇಲ್ಲಿ ಭವ್ಯಾರಾಣಿ 412 ಶೌಚಾಲಯಗಳನ್ನು ನಿರ್ಮಿಸಿದ್ದಾರೆ. 831 ಮನೆಗಳ ಸದಸ್ಯರು ಇನ್ನೂ ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದ್ದಾರೆ !.
ಇದೀಗ ಭವ್ಯಾರಾಣಿ ಸುತ್ತಮುತ್ತಲಿನ ಹಳ್ಳಿಗೂ ತೆರಳಿ ತನ್ನ ಕಾಯಕವನ್ನು ಮುಂದುವರಿಸಿದ್ದಾರೆ. ಸುಮಾರು 22 ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದಾರೆ. ಆದರೆ ಅದಕ್ಕೆ ಅನುದಾನದ ಕೊರತೆ ಇವರಿಗೆ ಕಾಡುತ್ತಿದೆ. ತನ್ನ ಈ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುವವರು ತನ್ನ `ಶೈನ್ ಇಂಡಿಯಾ ಟ್ರಸ್ಟ್’ಗೆ ನೆರವು ನೀಡಲು ಕೋರಿದ್ದಾರೆ.
ಶೈನ್ ಇಂಡಿಯಾ ಟ್ರಸ್ಟ್, ಕಾರ್ಪೊರೇಶನ್ ಬ್ಯಾಂಕ್ ಕೊಡಿಯಾಲಬೈಲ್ ಸಿಪಿಬಿ, ಅಕೌಂಟ್ ನಂಬರ್ 06150010142291, ಐ ಎಫ್ ಎಸ್ ಸಿ ಕೋಡ್: ಕಾರ್ಪ್ 0000615ಗೆ ಕಳುಹಿಸಿಕೊಡಬಹುದಾಗಿದೆ. ಇದಕ್ಕೆ ತೆರಿಗೆ ವಿನಾಯಿತಿ ಕೂಡಾ ಇದೆ.

via karavali ale

No comments