Breaking News

ಬಂಟ್ವಾಳ ಎಪಿಎಂಸಿ ಕಾಂಗ್ರೆಸ್ ಜಯಭೇರಿ



ಬಂಟ್ವಾಳ : ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದರೂ ಕಾಂಗ್ರೆಸ್ ಅಧಿಕಾರ ಗದ್ದುಗೆಯತ್ತ ದಾಪುಗಾಲು ಇಟ್ಟಿದೆ. ಇಲ್ಲಿನ ಎಪಿಎಂಸಿಯ ಒಟ್ಟು 13 ಕ್ಷೇತ್ರಗಳ ಪೈಕಿ ಬಿಜೆಪಿ 7 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಜನವರಿ 12 ರಂದು ನಡೆದಿದ್ದ ಎಪಿಎಂಸಿ ಚುನಾವಣೆಯ ಮತ ಎಣಿಕೆ ಕಾರ್ಯವು ಶನಿವಾರ ಬಿ ಸಿ ರೋಡು ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಪ್ರೌಢಶಾಲೆಯಲ್ಲಿ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬಿದ್ದಿದೆ.


ಸಹಕಾರ ಕ್ಷೇತ್ರಕ್ಕೆ ಜಿ ಪಂ ಸದಸ್ಯ ರವೀಂದ್ರ ಕಂಬಳಿ ಅವಿರೋಧ ಆಯ್ಕೆಗೊಂಡರೆ, ಉಳಿದ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಳಿಕೆ ಕ್ಷೇತ್ರದಿಂದ ಗೀತಾ ಶೆಟ್ಟಿ, ಕೆದಿಲ ಕ್ಷೇತ್ರದಿಂದ ಜಗದೀಶ್, ತುಂಬೆ ಕ್ಷೇತ್ರದಿಂದ ವಿಠಲ ಸಾಲ್ಯಾನ್, ಸರಪಾಡಿ ಕ್ಷೇತ್ರದಿಂದ ಹರಿಶ್ಚಂದ್ರ ಪೂಜಾರಿ, ಮಾಣಿ ಕ್ಷೇತ್ರದಿಂದ ನೇಮಿರಾಜ ರೈ, ವರ್ತಕರ ಕ್ಷೇತ್ರದಿಂದ ಬಾಲಕೃಷ್ಣ ಆಳ್ವ ಬಿಜೆಪಿ ಪರವಾಗಿ ಸ್ಪರ್ಧಿಸಿ ಜಯಭೇರಿ ಭಾರಿಸಿದ್ದಾರೆ.
ಕಾಂಗ್ರೆಸ್ ಪರವಾಗಿ ಸಂಗಬೆಟ್ಟು ಕ್ಷೇತ್ರದಿಂದ ಪದ್ಮರಾಜ ಬಲ್ಲಾಳ್, ಚೆನ್ನೈತ್ತೋಡಿ ಕ್ಷೇತ್ರದಿಂದ ಭಾರತಿ ಎಸ್ ರೈ, ಅಮ್ಟಾಡಿ ಕ್ಷೇತ್ರದಿಂದ ದಿವಾಕರ ಪಂಬದಬೆಟ್ಟು, ಕೊಳ್ನಾಡು ಕ್ಷೇತ್ರದಿಂದ ಚಂದ್ರಶೇಖರ ರೈ, ಕಡೇಶ್ವಾಲ್ಯ ಕ್ಷೇತ್ರದಿಂದ ಚಂದ್ರಶೇಖರ ಪೂಜಾರಿ ಹಾಗೂ ಪಾಣೆಮಂಗಳೂರು ಕ್ಷೇತ್ರದಿಂದ ಕೆ ಪದ್ಮನಾಭ ರೈ ಗೆಲವು ಸಾಧಿಸಿದ್ದಾರೆ.
ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನ 12 ರವೇಳೆಗೆ ಪೂರ್ಣ ಫಲಿತಾಂಶ ಹೊರಬಿದ್ದಿದೆ.
ಬಹುಮತ ಬಿಜೆಪಿಗೆ, ಅಧಿಕಾರ ಕಾಂಗ್ರೆಸ್‍ಗೆ
ಬಂಟ್ವಾಳ ಎಪಿಎಂಸಿಯಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡು ಬಿಜೆಪಿ ದೊಡ್ಡ ಪಕ್ಷವಾಗಿ ಮೂಡಿಬಂದರೂ 6 ಸ್ಥಾನಗಳನ್ನು ಪಡೆದುಕೊಂಡ ಕಾಂಗ್ರೆಸ್ ಅಧಿಕಾರದ ಬಾಗಿಲಲ್ಲಿ ನಿಂತಿದೆ. ಎಪಿಎಂಸಿಗೆ ಮೂವರು ನಾಮನಿರ್ದೇಶಿತ ಸದಸ್ಯರನ್ನು ಸರಕಾರ ನೇಮಿಸಲಿದ್ದು, ಈ ನಾಮನಿರ್ದೇಶಿತರೂ ಮತದಾನದ ಅಧಿಕಾರ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ನಾಮನಿರ್ದೇಶಿತ ಸದಸ್ಯರು ಕಾಂಗ್ರೆಸ್ ಸರಕಾರದಿಂದ ಆಯ್ಕೆಯಾಗುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಬಹುಮತ ಪಡೆಯಲಿದೆ. ಇದರಿಂದ ಬಂಟ್ವಾಳ ಎಪಿಎಂಸಿ ಅಧಿಕಾರ ಕಾಂಗ್ರೆಸ್ ಪಕ್ಷದ ಬೆಂಬಲಿತರ ಪಾಲಾಗುವುದು ಖಚಿತಗೊಂಡಿದೆ.

-karavali ale


loading...

No comments