Breaking News

ಬಿಜೆಪಿ ಹಿಂದಿನ ತಪ್ಪುಗಳಿಂದ ಪಾಠ ಕಲಿಯುವುದೇ ?


ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇತ್ತೀಚೆಗೆ  ರಾಜ್ಯದಲ್ಲಿ ಸಮರನಿರತ ಪಕ್ಷದ ರಾಜ್ಯ ನಾಯಕತ್ವಕ್ಕೆ ನೀಡಿದ `ಒಂದಾಗಿ ಇಲ್ಲವೇ ಹೊರನಡೆಯಿರಿ’ ಎಂಬ ಎಚ್ಚರಿಕೆ ಸ್ವಲ್ಪ ತಡವಾಗಿ ಬಂದಿದೆಯೆಂದೇ ಹೇಳಬಹುದು. ಅದಾಗಲೇ ಒಳಜಗಳಗಳು ತುಂಬಿ ಹೋಗಿರುವ ಪಕ್ಷವಾಗಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಬಿಂಬಿತವಾಗಿತ್ತಲ್ಲದೆ ಪಕ್ಷದ ವರ್ಚಸ್ಸಿಗೂ ಅದು ಕುಂದುಂಟು ಮಾಡಿತ್ತು.

ರಾಜ್ಯ ಬಿಜೆಪಿಯಲ್ಲಿನ ಒಡಕು ಹಾಗೂ ಭಿನ್ನಾಭಿಪ್ರಾಯಗಳನ್ನು ವಿಭಿನ್ನ ಕೋನಗಳಿಂದ ನೋಡಬೇಕಿದೆ. ಕೇಂದ್ರ ನಾಯಕತ್ವವೂ ಕರ್ನಾಟಕದ ಬಿಜೆಪಿಯಲ್ಲಿನ  ಸಮಸ್ಯೆ ಪರಿಹರಿಸುವ ತನ್ನ ಪ್ರಯತ್ನದಲ್ಲಿ ಹಲವಾರು ಸಂದಿಗ್ಧತೆಗಳನ್ನು ಎದುರಿಸಿದೆ.

ಬಿಜೆಪಿಯು `ಕಾಂಗ್ರೆಸ್ ಮುಕ್ತ ಭಾರತ’ ಗುರಿ ಸಾಧಿಸಬೇಕಾದರೆ ಕರ್ನಾಟಕ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.

ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಪ್ರಥಮ ಬಾರಿ ಗದ್ದುಗೆಯೇರಿದ ರಾಜ್ಯ ಕರ್ನಾಟಕವಾಗಿದೆ. ಮುಂದಿನ  ರಾಜ್ಯ ವಿಧಾನಸಭಾ ಚುನಾವಣೆಗಳಿಗೆ 18 ತಿಂಗಳುಗಳಿಗಿಂತಲೂ ಕಡಿಮೆ ಸಮಯವಿರುವುದರಿಂದ ಬಿಜೆಪಿ ಮತ್ತೊಮ್ಮೆ ತನ್ನ  ಭದ್ರಕೋಟೆಯನ್ನು ತನ್ನದಾಗಿಸುವ ತವಕದಲ್ಲಿದೆ.

2008ರಲ್ಲಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತಾದರೂ ಮುಂದೆ ಎದುರಿಸಿದ ಭ್ರಷ್ಟಾಚಾರ ಆರೋಪಗಳು, ಒಳಜಗಳಗಳು  ಪಕ್ಷದ ಪಾಲಿಗೆ ಕಂಟಕಪ್ರಾಯವಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಇಲ್ಲಿ ಕಾಂಗ್ರೆಸ್ ಪರ ಮತಗಳಿಗಿಂತ ಹೆಚ್ಚಾಗಿ ಬಿಜೆಪಿ ವಿರೋಧಿ ಮತಗಳೇ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದವು. ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ ರೀತಿ ಮತ್ತೊಮ್ಮೆ ಬಿಜೆಪಿಯ ಅಧಿಕಾರದ ಕನಸು ಗರಿಗೆದರುವಂತೆ ಮಾಡಿದೆ.

ತಾನು 2008ರಲ್ಲಿ ಅಧಿಕಾರಕ್ಕೆ ಬಂದ ನಂತರದ ಒಳಜಗಳಗಳಂತೆ ಮತ್ತೆ ಪಕ್ಷ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿದರೆ ಹಾಗೂ ನಾಯಕರ ಕಚ್ಚಾಟ ಮುಂದುವರಿದಿದ್ದೇ ಆದಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸನ್ನು ಮರೆತೇ ಬಿಡಬೇಕೆಂಬ ಅರಿವಿನಿಂದಲೇ ಕೇಂದ್ರ ನಾಯಕತ್ವ ರಾಜ್ಯದಲ್ಲಿ ಕಾದಾಡುತ್ತಿರುವ ಯಡ್ಡಿಯೂರಪ್ಪ ಮತ್ತು ಈಶ್ವರಪ್ಪರಿಗೆ ಕೊನೆಗೂ ಚಾಟಿ ಬೀಸಿತ್ತು.

ಸಂದೀಪ್ ಶಾಸ್ತ್ರಿ
-karavali ale 

loading...

No comments