Breaking News

ನುಡಿದಂತೆ ನಡೆದಿದ್ದೇನೆ ಸಿದ್ದರಾಮಯ್ಯ


ಬೆಂಗಳೂರು : ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ 9 ತಿಂಗಳಾಗಿದ್ದು, ಈ ಸಂದರ್ಭದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಈ ವಿಚಾರದಲ್ಲಿ ನನಗೆ ಆತ್ಮವಿಶ್ವಾಸವಿದೆ ಮತ್ತು ಆತ್ಮಸಾಕ್ಷಿ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಹೇಳಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ್ದ 165 ಭರವಸೆಗಳ ಪೈಕಿ 125 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.
ಈ ವಿಚಾರಗಳನ್ನು ನಾನು ಪ್ರಚಾರಕ್ಕೋಸ್ಕರ ಹೇಳುತ್ತಿಲ್ಲ. ನನಗೆ ಪ್ರಚಾರದ ಗೀಳೂ ಇಲ್ಲ. ಕೆಲವು ಮಾಧ್ಯಮದ ಗೆಳೆಯರು, ರಾಜಕೀಯ ಹಿತೈಷಿಗಳು ನೀವು ಕೆಲಸ ಮಾಡ್ತಾ ಇದ್ದೀರಿ ಆದರೆ ಪ್ರಚಾರ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಪ್ರಾಡೆಕ್ಟ್‌ಗಳಿಗೆ ಮಾರ್ಕೆಟಿಂಗ್ ಸರಿಯಾಗಿ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ನಾನು ಪ್ರಚಾರಕ್ಕೋಸ್ಕರ ಎಂದೂ ಆಸೆಪಟ್ಟಿಲ್ಲ. ಜನರ ಮುಂದೆ ನೇರವಾಗಿ ಹೇಳುವುದು ನನ್ನ ಜಾಯಮಾನ ಎಂದರು.
ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ತಮ್ಮ ಭಾಷಣದಲ್ಲಿ ಈ ಸರ್ಕಾರ ನಿಷ್ಕ್ರೀಯವಾಗಿದೆ. ಜಡತ್ವದಿಂದ ಕೂಡಿದೆ ಕ್ರೀಯಾಶೀಲವಾಗಿಲ್ಲ, ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಪದೇ ಪದೇ ಟೀಕಿಸಿದ್ದಾರೆ. ಅವರ ಟೀಕೆಯಿಂದ ನಾನೇನು ಆತಂಕಗೊಂಡಿಲ್ಲ ಎಂದರು.
ಅನ್ನಭಾಗ್ಯ ಯೋಜನೆಯಡಿ 1 ಕೋಟಿ 8 ಲಕ್ಷ ಕುಟುಂಬಗಳಿಗೆ ಉಚಿತವಾಗಿ ತಲಾ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆ 1 ಕೋಟಿ 2 ಲಕ್ಷ ಮಕ್ಕಳಿಗೆ ಹಾಲು ಪೂರೈಸಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂ. ಖರ್ಚು ಮಾಡಲಾಗುವುದು ಎಂದು ಭರವಸೆ ನೀಡಿದೆ. ಐದು ವರ್ಷಗಳಿಗೆ 50 ಸಾವಿರ ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ 43 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಸಣ್ಣ ನೀರಾವರಿ ಯೋಜನೆಗಳನ್ನು ಹೊರತುಪಡಿಸಿ ಮಧ್ಯಮ ಮತ್ತು ಭಾರಿ ನೀರಾವರಿ ಯೋಜನೆಗಳಿಗೆ ಈ ಹಣ ಖರ್ಚು ಮಾಡಲಾಗಿದೆ. ನಿಷ್ಕ್ರೀಯ, ಕ್ರಿಯಾಶೀಲವಲ್ಲದ ಟೇಕ್ಆಫೇ ಆಗದ ಸರ್ಕಾರ ಇಷ್ಟೆಲ್ಲಾ ಮಾಡಲು ಸಾಧ್ಯವೆ ಎಂದು ಪ್ರತಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು.
ಮುಂದಿನ ವರ್ಷ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲು ಉದ್ದೇಶಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟಾರೆ 60 ಸಾವಿರ ಕೋಟಿ ರೂ. ಖರ್ಚು ಮಾಡಿದಂತಾಗಲಿದೆ ಎಂದರು.
ಲೋಕೋಪಯೋಗಿ ಇಲಾಖೆ ವತಿಯಿಂದ ನಮ್ಮ ಸರ್ಕಾರ ಬಂದ ಮೇಲೆ 9 ಸಾವಿರ ಕಿ. ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. 17 ಸಾವಿರ 200 ಕಿ.ಮೀ. ಜಿಲ್ಲಾ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆ ಅನುಗುಣವಾಗಿ ಹಣ ಖರ್ಚು ಮಾಡಲು ಕ್ರಾಂತಿಕಾರಕ ಕಾಯ್ದೆಯೊಂದನ್ನು 2014-15 ರಿಂದ ಜಾರಿಗೆ ತಂದಿದ್ದು, ಕಳೆದ ಮೂರು ವರ್ಷದಲ್ಲಿ 60 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು, ಇದುವರೆಗೆ 44 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅವರು ಅಂಕಿ ಅಂಶ ಸಮೇತ ತಮ್ಮ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಂಡರು.
ಈ ವರ್ಷ ಈ ವರ್ಗದ ಜನರ ಕಲ್ಯಾಣಕ್ಕಾಗಿ 19,543 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು.
-sanjevani


loading...

No comments