Breaking News

ರೈತರ ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ಹಣವಿಲ್ಲ : hdk


ಶಿರಸಿ : “ಬೆಳೆದ ಬೆಳೆ ಮಳೆ ಕೊರತೆಯಿಂದ ರೈತರ ಕೈ ಸೇರಿಲ್ಲ. ಮಾರ್ಚ್ ಅಂತ್ಯದೊಳಗೆ ರೈತರು ಪಡೆದ ಸಾಲ ಮರುಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳುವ ಕಾಂಗ್ರೆಸ್ ಇನ್ನೂ ಹುಡುಗಾಟದ ಬುದ್ಧಿ ಬಿಟ್ಟಿಲ್ಲ. ಸಾಲ ಮಾಡಿ ಬೆಳೆ ಬೆಳೆದು ನಷ್ಟದಲ್ಲಿರುವ ರೈತರು ಮಾರ್ಚ್ ಅಂತ್ಯಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವೇ ಇಲ್ಲ. ಕೈಗಾರಿಕೆಗಳ ಹೆಸರಲ್ಲಿ ಸಾವಿರಾರು ಕೋಟಿ ಕಮಿಶನ್ ಹೊಡೆಯಲು ಸರ್ಕಾರಕ್ಕೆ ಹಣವಿದೆ, ಆದರೆ ರೈತರ ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ಹಣವಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ತಾಲೂಕಿನ ಅಂಡಗಿ ಕಲ್ಲೇಶ್ವರ ಗುರುಮಠಕ್ಕೆ ಮಂಗಳವಾರ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಬಡವರ ಬಗ್ಗೆ ಚರ್ಚೆ ಮಾಡದೇ ಮತ್ತು ರೈತರ ಕಷ್ಟಗಳಿಗೆ ಸ್ಪಂದನೆ ನೀಡದೆ ಬಿಜೆಪಿ ಯಡ್ಡಿಯೂರಪ್ಪ-ಈಶ್ವರಪ್ಪರು ರಾಜಕಾರಣದ ಮೂಲಕ ರಾಜ್ಯದ ಜನರ ಗಮನ ಸೆಳೆಯುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಯಣ್ಣ ಬ್ರಿಗೆಡ್ ಕಟ್ಟುತ್ತೇನೆ ಎಂದು ಈಶ್ವರಪ್ಪ ದೆಹಲಿಯಲ್ಲಿ ಯಡ್ಡಿಯೂರಪ್ಪನ ಜೊತೆ ಪಂಚಾಯ್ತಿ ನಡೆಸಿ ರಾಯಣ್ಣನ ಬಿಟ್ಟು ವಿಮಾನವೇರಿ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ರಾಜ್ಯದಲ್ಲಿ ಭಿಕರ ಬರಗಾಲದ ನಡುವೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಕಾಲಹರಣದಲ್ಲಿ ತೊಡಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಂದಾಯ ಸಚಿವರು ನಿನ್ನೆವರೆಗೂ ಮುಂಗಾರು ಹಾಗೂ ಹಿಂಗಾರಿನ ಮಳೆ ಕೊರತೆಯಿಂದ ರಾಜ್ಯದಲ್ಲಿ ಬೆಳೆ ನಷ್ಟ 17,000 ಕೋಟಿ ರೂ ಎಂದಿದ್ದರು. ಆದರೆ ಕೇಂದ್ರ ಸರ್ಕಾರಕ್ಕೆ ರೈತರ ಬೆಳೆ ಹಾನಿ ಕುರಿತು ಮಾಹಿತಿ ನಿಡುವಾಗ ಮುಖ್ಯಂತ್ರಿಗಳು ಬೆಳೆ ನಷ್ಟ 25,000 ಕೋಟಿ ರೂ ದಾಟಿದೆ ಎಂದಿದ್ದಾರೆ. ಇದರಲ್ಲೇ ರಾಜ್ಯ ಸರ್ಕಾರದ ಗಂಭೀರತೆ ಅರ್ಥವಾಗುತ್ತದೆ. ಸಂಪೂರ್ಣ ಗೊಂದಲ ವಾತಾವರಣದಲ್ಲಿ ರಾಜ್ಯ ಸರ್ಕಾರ ಸಿಲುಕಿದೆ” ಎಂದರು.

“ಅಡ್ವಾಣಿಯವರ ಕಾಲದಿಂದಲೂ ಸಹ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಾಗಿ ರಾಮನ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಸಹ ರಾಮಮಂದಿರ ನಿರ್ಮಾಣದ ಕುರಿತು ಚಕಾರವೆತ್ತಿಲ್ಲ. ಆದರೆ ಉತ್ತರ ಪ್ರದೇಶದ ಚುನಾವಣೆ ಪ್ರಣಾಳಿಕೆಯಲ್ಲಿ ಮತ್ತೆ ರಾಮಮಂದಿರ ಕಟ್ಟುತ್ತೇವೆ ಎಂದು ನಮೂದಿಸಿದ್ದಾರೆ. ಕಳೆದ 20 ವರ್ಷಗಳಿಂದ ರಾಮನಿಗೆ ಮಂದಿರ ಕಟ್ಟುತ್ತೇವೆಂದು ಹೇಳುತ್ತಾ ಬಿಜೆಪಿಗರು ರಾಮನನ್ನೇ ಮರೆಯುತ್ತಿದ್ದಾರೆ” ಎಂದರು.

ಸೊರಬ ಶಾಸಕ ಮಧು ಬಂಗಾರಪ್ಪ ಮಾತನಾಡಿ, “ಸರ್ಕಾರದ ವೈಫಲ್ಯತೆಯಿಂದ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚು ಮಾಡಲಾಗಿಲ್ಲ. ರಾಜ್ಯದ ಭವಿಷ್ಯಕ್ಕೋಸ್ಕರ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಬೇಕು. ಆದರೆ ಈಗ ಚಪ್ಪಾಳೆ ಹೊಡೆದು ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ. ರೈತರ ಆತ್ಮಹತ್ಯೆಯ ಕಾರಣಗಳನ್ನು ಕುಮಾರಸ್ವಾಮಿ ಗಮನಿಸಿ ಯಾರೊಬ್ಬರ ಅಭಿಪ್ರಾಯ ಕೇಳದೇ ರೈತರ ಸಾಲ ಮನ್ನಾ ಮಾಡಿದವರಾಗಿದ್ದಾರೆ. ಬನವಾಸಿ ಭಾಗದಲ್ಲಿ ಬಿತ್ತನೆ ಬೀಜ ಕಳಪೆ ನೀಡಿ ರೈತರಿಗೆ ಪಂಗನಾಮ ಹಾಕಿದ್ದು, ಬೆಳೆವಿಮೆ ಹೆಸರಲ್ಲಿ ವಿಮಾ ಕಂಪೆನಿಗಳು ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತಿವೆ” ಎಂದರು.
-karavli ale

loading...

No comments