Breaking News

ಪದ್ಮಶ್ರೀ ಸುಕ್ರಜ್ಜಿ ಯಾರು ಗೊತ್ತೇ


ಅಂಕೋಲಾ : “ನಾನು ಹಾಡೋ ಹಾಡುಗಳಿಗೆ ನನ್ನವ್ವನೇ ಶಿಕ್ಷಕಿ ವಿನಃ ಬೇರ್ಯಾರೂ ಇಲ್ಲ” ಎಂದು ಪದ್ಮಶ್ರೀ ಪುರಸ್ಕøತ ಜನಪದ ಹಾಡುಗಾರರಾದ ಸುಕ್ರಿ ಬೊಮ್ಮ ಗೌಡ ಹೇಳಿದರು.

ಸೋಮವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ನಡೆದ ತಮ್ಮೊಂದಿಗಿನ ಸಂವಾದದಲ್ಲಿ ಸುಕ್ರಜ್ಜಿ ಎಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ನಿಮ್ಮ ಬಾಯಿಯಿಂದ ಇಷ್ಟೆಲ್ಲ ಹಾಡುಗಳು ಬರುತ್ತವೆ. ನೀವು ಹೋರಾಟಕ್ಕೂ ಸೈ. ಇದನ್ನೆಲ್ಲ ಕಲಿಸಿದ ಶಿಕ್ಷಕರು ಯಾರು ಎಂದು ಕೇಳಿದಾಗ ಅಷ್ಟೇ ಚುಟುಕಾಗಿ ಉತ್ತರಿಸಿದ ಅಜ್ಜಿ, ನಮ್ಮವ್ವನೇ ಶಿಕ್ಷಕಿ ಎಂದರು.

ಇಂದು ಪ್ರಶಸ್ತಿ , ಸನ್ಮಾನ ಬಂದಾಕ್ಷಣ ಜನರು ದೊಡ್ಡ ದೊಡ್ಡ ಹುದ್ದೆಯ ಆಶೆ ಇರಿಸಿಕೊಳ್ಳುತ್ತಾರೆ. ಏನೇನೋ ಆಗುವ ಕನಸು ಕಾಣುತ್ತಾರೆ. ನಿಮಗೆ ಇಂತಹ ಯಾವ ಆಶೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುಕ್ರಜ್ಜಿ, “ನನಗೇನೂ ಆಶೆ ಇಲ್ಲ. ಹುದ್ದೆಯೆಲ್ಲವೂ ಬೇಕಾದವ್ರು ಇರಿಸಿಕೊಳ್ಳಲಿ. ನಾವು ಬರುವಾಗ ಬೆತ್ತಲೆ, ಹೋಗುವಾಗಲೂ ಬೆತ್ತಲೆ. ಏನಿದ್ದರೂ ಇಲ್ಲೇ ಬಿಟ್ಟು ಹೋಗುತ್ತೇವೆ. ಇರುವಷ್ಟು ದಿನ ನಮ್ಮ ಜನರೊಂದಿಗೆ ಇರುವ ಆಶೆ ಬಿಟ್ರೆ ಇನ್ನೇನೂ ಇಲ್ಲ” ಎಂದರು.

ಜನಪದ ಹಾಡುಗಳನ್ನು ಮುಂದಿನ ಪೀಳಿಗೆಗೆ ನೀಡುವ ಪ್ರಯತ್ನ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಸಮಾಜದ ಎಳೆಯರಿಗೆ ಹಾಡುಗಳನ್ನು ಕಲಿಸುತ್ತಿದ್ದೇನೆ. ನಮ್ಮ ವಾರಗೆಯ ಹೆಂಗಸರು ನನ್ನ ಜೊತೆಗೆ ಹಾಡಲು ಬರುತ್ತಾರೆ” ಎಂದರು.

ಎಂಭತ್ತರ ಹರೆಯದಲ್ಲಿರುವ ನಿಮ್ಮ ಆರೋಗ್ಯದ ಗುಟ್ಟೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಕ್ರಜ್ಜಿ, “ನಾವು ಎಷ್ಟೇ ಕಷ್ಟ ಬರಲಿ ಸಂತೋಷವಾಗಿ ಇರಬೇಕು. ನಮ್ಮ ಹಾಗೆ ಉಳಿದವರೂ ಸುಖವಾಗಿ ಇರಬೇಕು ಎಂಬ ಭಾವನೆ ಇರಬೇಕು. ನಮ್ಮ ಆತ್ಮ ಖುಷಿಯಾಗಿದ್ದರೆ ಇನ್ನೇನೂ ಬೇಡ. 100 ವರ್ಷ ಬಾಳಬಹುದು” ಎಂದು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.

ಸಾಮಾಜಿಕ ಚಳುವಳಿಗೆ ಪ್ರೇರಣೆ ಏನು ಅಂದಾಗ, ಸಮಾಜದ ಮಧ್ಯೆ ಇದ್ದೆನಲ್ಲ. ಅದೇ ಪ್ರೇರಣೆ ಎಂದರು. “ಹೋರಾಟ ಮಾಡುವಾಗ ಧೈರ್ಯ ಇರಬೇಕು. ಸಾರಾಯಿ ವಿರುದ್ಧ ಹೋರಾಡುವಾಗ ಎಷ್ಟೋ ಜನ ಜಗಳಕ್ಕೆ ಬಂದಿದ್ದರು. ನಾನು ಸೊಪ್ಪು ಹಾಕಲಿಲ್ಲ. ಈಗಲೂ ಕರೀರಿ, ನಾನೂ ಬರ್ತೇನೆ” ಎಂದು ಸವಾಲು ಹಾಕಿದರು. ಹೀಗೆ ಹಲವು ಪ್ರಶ್ನೆಗಳಿಗೆ ಸುಕ್ರಿ ಗೌಡರು ಮಾರ್ಮಿಕ ಉತ್ತರ ನೀಡಿದರು. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಜಾನಪದ ವಿದ್ಯಾಂಸ ಕಾಳೇಗೌಡ ನಾಗವಾರ್ ಅವರು ಸುಕ್ರಿ ಗೌಡ ಅವರನ್ನು ಅಕಾಡೆಮಿ ಪರವಾಗಿ ಸನ್ಮಾನಿಸಿದರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಉಪಸ್ಥಿತರಿದ್ದರು. ಜಾನಪದ ವಿದ್ವಾಂಸ ಕೆ ಎಂ ಮೇತ್ರಿ ಸಂವಾದ ಸಮನ್ವಯಕಾರರಾಗಿದ್ದರು. ಪ್ರಕಾಶ ನಾಯಕ ಅವರ ಬದುಕು ಬರೆದ ಸುಕ್ರಜ್ಜಿ ಪುಸ್ತಕ ಬಿಡುಗಡೆಯಾಯಿತು.
loading...

No comments