Breaking News

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಕೊಬ್ಬರಿ ಎಣ್ಣೆ



ಕೊಬ್ಬರಿ ಎಣ್ಣೆ ಅತ್ಯಂತ ಆರೋಗ್ಯಕರವಾಗಿದ್ದು, ಪುಟ್ಟಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನವರೂ ಯಾವುದೇ ಆತಂಕವಿಲ್ಲದೆ ಉಪಯೋಗಿಸಬಹುದಾದ ಬಹುಪಯೋಗಿ ಎಣ್ಣೆಯಾಗಿದೆ.
ಪುಟ್ಟಮಕ್ಕಳಿಗೂ, ನವಜಾತ ಶಿಶುಗಳಿಗೂ ಕೊಬ್ಬರಿ ಎಣ್ಣೆ ಸೂಕ್ತವಾಗಿದ್ದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ದೇಹದ ಆರೋಗ್ಯ, ಅದರಲ್ಲೂ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ.
ಕೊಬ್ಬರಿ ಎಣ್ಣೆಯಲ್ಲಿ ಸಮೃದ್ಧವಾಗಿರುವ ಪೋಷಕಾಂಶ, ಲಾರಿಕ್ ಆಮ್ಲದಿಂದ ಯಾವುದೇ ರೀತಿಯ ಉರಿತ ತರಿಸುವುದಿಲ್ಲ. ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ. ಹಿರಿಯರಿಗೆ ಅಭ್ಯಂಜನಕ್ಕೆ ಕೊಬ್ಬರಿ ಎಣ್ಣೆ ಹೇಗೆ ಸೂಕ್ತವೋ ಹಾಗೆಯೇ ಚಿಕ್ಕಮಕ್ಕಳಿಗೂ ಕೊಬ್ಬರಿ ಎಣ್ಣೆ ಉತ್ತಮವಾಗಿದೆ.
ಸಾಮಾನ್ಯವಾಗಿ ಮಕ್ಕಳ ಚರ್ಮದ ತೈಲಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಸೂಕ್ಷ್ಮ ಗೀರುಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಚರ್ಮ ಕೆಂಪಾಗುವುದು. ತುರಿಕೆ ಮುಂತಾದ ಸಮಸ್ಯೆಗಳೂ ಎದುರಾಗಲಿದ್ದು, ಅವುಗಳ ನಿವಾರಣೆಗೆ ಕೊಬ್ಬರಿ ಎಣ್ಣೆ ಸಹಕಾರಿಯಾಗಲಿದೆ.
ಲಾರಿಕ್ ಆಮ್ಲ ಎಂಬ ಪೋಷಕಾಂಶ, ತಾಯಿ ಹಾಲಿನಲ್ಲೂ ಹೇರಳವಾಗಿದ್ದು, ಮಗುವಿನ ಪೋಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ. ಆದ್ದರಿಂದ ಗರ್ಭಿಣಿಯರು ಹಾಗೂ ಮಗುವಿಗೆ ಹಾಲುಣಿಸುತ್ತಿರುವ ತಾಯಂದಿರು ತಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.
ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲದಿಂದ ತಾಯಿ ಹಾಲು ವೃದ್ಧಿಯಾಗುವುದರ ಜತೆಗೆ, ತಾಯಿಯಾಗುವವರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹ ಮತ್ತು ಹೆಚ್ಚು ಹಾಲು ಉತ್ಪತ್ತಿಯಾಗಲು ಸಹಕರಿಸುತ್ತದೆ. ಇದರ ಪರಿಣಾಮವಾಗಿ ಮಗುವಿನ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ಕೊಬ್ಬರಿ ಎಣ್ಣೆಯಲ್ಲಿರುವ ಟ್ರೈ ಗ್ಲಿಸ್‌ರೈಡ್ ಎಂಬ ಅಂಶ ಮಗುವಿನ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದಾಗಿ ಮಗುವಿನ ಆರೋಗ್ಯ ಉತ್ತಮಗೊಂಡು, ದಿನೇ ದಿನೇ ವಿವಿಧ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಕೊಬ್ಬರಿ ಎಣ್ಣೆ ಉತ್ತಮ ತೇವಕಾರಕವಾಗಿದ್ದು, ಮಕ್ಕಳ ಕೋಮಲ ಚರ್ಮಕ್ಕೂ ಸೂಕ್ತವಾಗಿದೆ. ಚಿಕ್ಕವಯಸ್ಸಿನಿಂದಲೇ ನಿಯಮಿತವಾಗಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಮಕ್ಕಳ ಚರ್ಮವನ್ನು ಸೋಂಕುಗಳಿಂದ ರಕ್ಷಿಸಬಹುದಾಗಿದೆ.
ಮಕ್ಕಳ ಸುಖನಿದ್ರೆಗೂ ಕೊಬ್ಬರಿ ಎಣ್ಣೆ ನೆರವಾಗಲಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ಸಹಕರಿಸುತ್ತದೆ. ಮಕ್ಕಳ ಮೂಳೆಗಳು ಸದೃಢವಾಗಿಸುತ್ತದೆ.
ಬಿಸಿಲಿನಲ್ಲಿ ಒಣಗಿಸಿದ ಕೊಬ್ಬರಿಯನ್ನು ತುರಿದು, ಸಾಂಪ್ರದಾಯಿಕ ಪದ್ಧತಿಯಲ್ಲಿ ಹಿಂಡಿ ತೆಗೆದ ಎಣ್ಣೆ ಬಳಸುವುದು ಅತ್ಯಂತ ಸೂಕ್ತ. ಆದರೆ ಈ ರೀತಿಯ ಎಣ್ಣೆಯನ್ನು ಎಲ್ಲರೂ ನಿರೀಕ್ಷಿಸಲಾಗದು. ಸಾಧ್ಯವಾದಲ್ಲಿ ತಯಾರಿಸಿಕೊಳ್ಳಬಹುದು.
ಸಮುದ್ರ ತೀರ ಮತ್ತು ದ್ವೀಪಗಳ ವಾಸಿಗಳು ತೆಂಗಿನ ಎಣ್ಣೆಯನ್ನು ಆಹಾರ ಪದಾರ್ಥಗಳ ತಯಾರಿಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ರೂಢಿಯಲ್ಲಿದೆ. ಹಾಗಾಗಿ ಕೊಬ್ಬರಿ ಎಣ್ಣೆಯನ್ನು ಎಲ್ಲರೂ ಬಳಕೆ ಮಾಡಬಹುದಾಗಿದೆ.

loading...

No comments