15 ದಿನದಲ್ಲಿ ಇಳಿಯಲಿದೆ ಟೊಮ್ಯಾಟೊ ಬೆಲೆ
ನವದೆಹಲಿ :ಗಗನ ಮುಖಿಯಾಗಿರುವ ಟೊಮಾಟೋ ಬೆಲೆ ಮುಂದಿನ 15 ದಿನಗಳಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲೀಗ 18 ಗ್ರಾಂಗೆ 100 ರೂ.ವರೆಗೆ ಟೊಮೊಟೊ ಬೆಲೆ ಇದ್ದು, ದುಬಾರಿ ಬೆಲೆ ತೆರಲಾಗದೆ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಟೊಮೊಟೊ ಬೆಳೆಯುವ ದಕ್ಷಿಣ ಭಾರತ ಹಾಗೂ ಇತರ ಕಡೆಗಳಲ್ಲಿ ಉತ್ಪಾದನೆ ಹೆಚ್ಚಾಗಿ ಮಾರುಕಟ್ಟೆಗೆ ಪೂರೈಕೆಯಾಗುವ ಸಾಧ್ಯತೆ ಇರುವುದರಿಂದ ಬೆಲೆಗಳು ಇಳಿಮುಖವಾಗಲಿವೆ ಎಂದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೇಶದ ಬಹುತೇಕ ಭಾಗಗಳಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಟೊಮೊಟೊ ಚಿಲ್ಲರೆ ಮಾರಾಟ ದರದಲ್ಲಿ ಏರಿಕೆಯಾಗಿದ್ದು, ಕೆಲವೆಡೆ 1 ಕಿ.ಗ್ರಾಂಗೆ 100 ರೂ.ವರೆಗೂ ಮಾರಾಟವಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಮಹಾನಗರಗಳಲ್ಲಿ ಟೊಮೊಟೊ ದುಬಾರಿಯಾಗಿದ್ದು, ಕೊಲ್ಕತ್ತಾದಲ್ಲಿ 1 ಕಿ.ಗ್ರಾಂಗೆ 95 ರೂ., ದೆಹಲಿಯಲ್ಲಿ 92 ರೂ., ಮುಂಬೈನಲ್ಲಿ 80 ರೂ. ಹಾಗೂ ಚೆನ್ನೈನಲ್ಲಿ 55 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಲಕ್ನೋದಲ್ಲಿ 1 ಕಿ.ಗ್ರಾಂಗೆ 95 ರೂ., ಭೂಪಾಲ್ ಮತ್ತು ತಿರುವನಂತಪುರದಲ್ಲಿ 90 ರೂ., ಅಹ್ಮದಾಬಾದ್‌ನಲ್ಲಿ 65 ರೂ., ಹೈದರಾಬಾದ್‌ನಲ್ಲಿ 55 ರೂ.ಗಳಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ 1 ಕೆ.ಜಿ.ಗೆ 75 ರೂ. ಇದ್ದರೆ, ಶಿಮ್ಲಾದಲ್ಲಿ 83 ರೂ.ಗೆ ಮಾರಾಟವಾಗುತ್ತಿದೆ. ಟೊಮೊಟೊ ಗುಣಮಟ್ಟ ಹಾಗೂ ತಳಿಗಳನ್ನು ಆಧರಿಸಿ ದರಗಳನ್ನು ನಿಗದಿ ಮಾಡಲಾಗುತ್ತಿದೆ.
ಕಳೆದ ವರ್ಷವೂ ಟೊಮೊಟೊ ದರದಲ್ಲಿ ಏರಿಕೆಯಾಗಿತ್ತು. ಈ ಬಾರಿಯಷ್ಟು ದುಬಾರಿಯಾಗಿರಲಿಲ್ಲ. `ನನ್ನ ಪ್ರಕಾರ ಮುಂದಿನ 15 ದಿನಗಳಲ್ಲಿ ಟೊಮೊಟೊ ಬೆಲೆ ಇಳಿಕೆಯಾಗಲಿದೆ. ದಕ್ಷಿಣ ರಾಜ್ಯಗಳು ಹಾಗೂ ಇತರ ಭಾಗಗಳಲ್ಲಿ ಟೊಮೊಟೊ ಬೆಳೆಯುವ ಪ್ರದೇಶ ವಿಸ್ತಾರಗೊಂಡಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಉಪಮಹಾ ನಿರ್ದೇಶಕ ಎ.ಕೆ. ಸಿಂಗ್ ತಿಳಿಸಿದ್ದಾರೆ.
ಮಳೆ ಕಡಿಮೆಯಾಗುತ್ತಿದ್ದಂತೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲೂ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗದ ಸಾಧ್ಯತೆಯಿದ್ದು, ದರಗಳಲ್ಲೂ ಇಳಿಮುಖ ಕಾಮಬಹುದಾಗಿದೆ ಎಂದು ಅವರು ಹೇಳಿದ್ದಾರೆ.
loading...
No comments