ಬಿಜೆಪಿ ತೊಲಗಲಿ ಅಭಿಯಾನ ಕರ್ನಾಟಕದಲ್ಲಿ ನಡೆಸಲಿದ್ದಾರೆ ರಾಹುಲ್ ಗಾಂಧಿ
ಬೆಂಗಳೂರು : ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮುಂದಾಗಿರುವ ಬಿಜೆಪಿಯ ತಂತ್ರಗಾರಿಕೆಗೆ ತಿರುಗೇಟು ನೀಡಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ’ ಬಿಜೆಪಿ ತೊಲಗಿ’ ಅಭಿಯಾನ ಮೂಲಕ ರಣಕಹಳೆ ಮೊಳಗಿಸಲು ಮುಂದಾಗಿದೆ.
ಮುಂಬರುವ ವಿಧಾನ ಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟು ನಗರದಲ್ಲಿ ಮೂರು ದಿನಗಳ ಕಾಲ ಮೊಕ್ಕಾಂ ಹೂಡಿ ಪಕ್ಷ ಸಂಘಟನೆಗೆ ಕಾರ್ಯತಂತ್ರ ರೂಪಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವೂ ಕೂಡ ಚುನಾವಣೆಯನ್ನು ಪ್ರತೀಷ್ಠೆಯಾಗಿ ಸ್ವೀಕರಿಸಿದ್ದು ತನ್ನದೇ ಆದ ರಣತಂತ್ರದ ಮೂಲಕ ಪಕ್ಷವನ್ನು ಅಣಿಗೊಳಿಸಲು ಮುಂದಾಗಿದೆ.
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ ೧೨ ರಂದು ಉತ್ತರ ಕರ್ನಾಟಕ ಅದರಲ್ಲಿಯೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದಾರೆ. ರಾಯಚೂರಿನಲ್ಲಿ ಅಂದು ನಡೆಯಲಿರುವ ಐದಾರು ಜಿಲ್ಲೆಗಳ ಬೃಹತ್ ಸಮಾವೇಶದಲ್ಲಿ ೨ ಲಕ್ಷಕ್ಕೂ ಅಧಿಕ ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರದ ರಣತಂತ್ರದ ಕಹಳೆಯನ್ನು ಅಧಿಕೃತವಾಗಿ ಮೊಳಗಿಸಲಿದ್ದಾರೆ.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದ ಅವಧಿಯಲ್ಲಿ ಸಂವಿಧಾನದ ೩೭೧ ಜೆ ಕಲಂಗೆ ತಿದ್ದುಪಡಿ ತರುವ ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಆಗಿರುವ ಪ್ರಯೋಜನ ಮತ್ತು ಮುಂದೆ ಆಗಬೇಕಾಗಿರುವ ಕಾರ್ಯಕ್ರಮಗಳ ಕುರಿತು ಆ ಭಾಗದ ಜನರಿಗೆ ಮನವರಿಕೆ ಮಾಡಿಕೊಡಲಿದ್ದು ’ಕೈ’ ಬಲಪಡಿಸಲು ’ನೀವು ನಮ್ಮೊಂದಿಗೆ ಇರಿ ನಾವು ನಿಮ್ಮೊಂದಿಗೆ ಇರುತ್ತೇವೆ’ ಎನ್ನುವ ಅಭಯವನ್ನು ಈ ಭಾಗದ ಜನರಿಗೆ ನೀಡಲು ಮುಂದಾಗಿದ್ದಾರೆ.
ರಾಯಚೂರಿನ ಸಮಾವೇಶ ಮುಗಿದ ಬಳಿಕ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೇ ೧೬ ರಂದು ’ಬಿಜೆಪಿ ತೊಲಗಿಸಿ’ ಅಭಿಯಾನಕ್ಕೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದು ೫೦ ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ
ಇದೇ ವೇಳೆ ರಾಜ್ಯ ಸರ್ಕಾರ ನೂತನವಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಿಂದ ರಾಜ್ಯದ ಬಡಜನರಿಗೆ ಆಗಿರುವ ಅನುಕೂಲ ಹಾಗು ಇದೇ ದಿಕ್ಕಿನಲ್ಲಿ ಸಾಗಿರುವ ನೂತನ ಇಂದಿರಾ ಕ್ಯಾಂಟೀನ್ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಕೈ ಪಾಳಯದಲ್ಲಿ ಹೊಸ ಸಂಚಲನ: ಮುಂಬರುವ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಸರಣಿ ಸಭೆ ಮತ್ತು ಸಮಾವೇಶ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷದ ಸಿಪಾಯಿಗಳಲ್ಲಿ ಹೊಸ ಹುರುಪು ಮತ್ತು ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶತಾಯ ಗತಾಯ ಪ್ರಯತ್ನಕ್ಕೆ ಮುಂದಾಗಿದೆ.
ಬಾಕ್ಸ್* ಆ.೧೨ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮನ
* ರಾಯಚೂರಿನಲ್ಲಿ ಬೃಹತ್ ಸಮಾವೇಶ
* ೨ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ
* ಆ.೧೬ ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ
* ಬಿಜೆಪಿ ತೊಲಗಿ ಅಭಿಯಾನಕ್ಕೆ ಚಾಲನೆ
* ಅಂದೇ ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಉದ್ಘಾಟನೆ
* ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿ ಹಲವು ನಾಯಕರು ಭಾಗಿ
loading...
No comments