ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ತೆಗೆಯಲಾಗದೆ ಹೆಂಡತಿಯ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಿದ ಗಂಡ.
ನವದೆಹಲಿ : ಸೆಕ್ಟರ್-9 ಸ್ಲಂ ನಿವಾಸಿಯೊಬ್ಬರು ಕ್ಯಾನ್ಸರ್ ನಿಂದ ಮೃತಪಟ್ಟ ಹೆಂಡತಿಯ ಅಂತ್ಯಸಂಸ್ಕಾರಕ್ಕೆ ಹಣ ಸಿಗದೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.65 ವರ್ಷದ ತರಕಾರಿ ವ್ಯಾಪಾರಸ್ಥ ಮುನ್ನಿಲಾಲ್ ಹೆಂಡತಿ ಫೂಲ್ಮತಿ ಸೋಮವಾರ ಮಧ್ಯಾಹ್ನ 1ಗಂಟೆ ಹೊತ್ತಿಗೆ ಖಾಯಿಲೆ ಉಲ್ಬಣಿಸಿ ಮೃತಪಟ್ಟಿದ್ದರು.
ಲಾಲ್ ಹೇಳುವ ಪ್ರಕಾರ 'ಸೆಕ್ಟರ್-9 ಬ್ಯಾಂಕ್ ಆಫ್ ಇಂಡಿಯಾದಲ್ಲಿನ ನನ್ನ ಬ್ಯಾಂಕ್ ಖಾತೆಯಲ್ಲಿ 15,000ಕ್ಕೂ ಹೆಚ್ಚು ಮೊತ್ತದ ಹಣವಿದೆ. ಆದರೆ ನನ್ನ ಹೆಂಡತಿಯ ಅಂತಿಮ ಸಂಸ್ಕಾರಕ್ಕೆ ಹಣತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಹಾಗಾಗಿ ಹೆಂಡತಿಯ ಅಂತ್ಯಸಂಸ್ಕಾರ ನೆರವೇರಿಸಲು ಮಂಗಳವಾರ ಸಂಜೆವರೆಗೆ ಕಾಯಬೇಕಾಯಿತು.
ನಾನು ಬ್ಯಾಂಕ್ ನಲ್ಲಿ ಸೋಮವಾರ ಮೂರು ಗಂಟೆಗೂ ಹೆಚ್ಚುಹೊತ್ತು ಕ್ಯೂನಲ್ಲಿ ನಿಂತಿದ್ದರು ವ್ಯರ್ಥವಾಯಿತು. ನಾನು ಬ್ಯಾಂಕ್ ಸಿಬ್ಬಂದಿಗಳಲ್ಲಿ ನನ್ನ ಖಾತೆಯಲ್ಲಿರುವ ಹಣ ನೀಡಿ, ನನ್ನ ಹೆಂಡತಿಯ ಅಂತಿಮಸಂಸ್ಕಾರ ನೆರವೇರಿಸಬೇಕು ಎಂದು ಬೇಡಿಕೊಂಡರೂ ಯಾರು ನನ್ನ ಮಾತನ್ನು ಕೇಳಲಿಲ್ಲ. ಅವರು ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಭಾವಿಸಿದ್ದರು.ಮತ್ತು ಬ್ಯಾಂಕ್ ಬಾಗಿಲು ಹಾಕಿ ತೆರಳಿದರು.
ನನ್ನ ಹೆಂಡತಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದು ಅಂತ್ಯಸಂಸ್ಕಾರಕ್ಕೆ ದುಡ್ಡು ಹೊಂದಿಸಲಾಗದ ಕಾರಣ ಹೆಂಡತಿ ಮೃತದೇಹವನ್ನು ಒಂದು ದಿನಪೂರ್ತಿ ಐಸ್ ಮೇಲೆ ಇಟ್ಟಿದ್ದೆ. ಮರು ದಿನ ಮತ್ತೆ ಬೆಳಗ್ಗೆ ಬ್ಯಾಂಕ್ ಗೆ ಹೋಗಿ ಬ್ಯಾಂಕ್ ಸಿಬ್ಬಂದಿಗಳಲ್ಲಿ ಹಣ ನೀಡುವಂತೆ ಕೇಳಿಕೊಂಡರೂ ಮತ್ತೆ ಹಣ ನೀಡಲು ನಿರಾಕರಿಸಿದರು. ಕೊನೆಗೆ ಮನೆ ಅಕ್ಕಪಕ್ಕದವರ ಸಹಾಯದಿಂದ ಸ್ಥಳೀಯ ರಾಜಕೀಯ ವ್ಯಕ್ತಿಗಳಿಗೆ ಹಾಗೂ ಮಾದ್ಯಮಗಳಿಗೆ ವಿಷಯ ತಿಳಿಸಲಾಯಿತು. ಕೊನೆಗೆ ಮಾದ್ಯಮದವರು ಹಾಗೂ ಸ್ಥಳೀಯ ರಾಜಕಾರಣಿ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿ ಘಟನೆ ಬಗ್ಗೆ ಪ್ರಶ್ನಿಸಿದ ನಂತರ ಬ್ಯಾಂಕ್ ಮ್ಯಾನೇಜರ್ ನನ್ನನ್ನು ಕ್ಯಾಬಿನ್'ಗೆ ಕರೆದು ನನ್ನ ಖಾತೆಯಿಂದ 15,000 ಹಣ ನೀಡಿದರು ಎಂದು ಮುನ್ನಿಲಾಲ್ ಮಾಧ್ಯಮದ ಮುಂದೆ ವಿವರಿಸಿದರು.
ಮುನ್ನಿಲಾಲ್ ಮತ್ತು ಆತನ ಮಗನ ಬ್ಯಾಂಕ್ ಖಾತೆಯಲ್ಲಿ ಒಟ್ಟು 16,023 ಮೊತ್ತದ ಹಣವಿತ್ತು ,ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಶಿಶುಪಾಲ್'ರನ್ನು ಪ್ರಶ್ನಿಸಿದಾಗ ಅವರು ಹೇಳುವುದೇ ಬೇರೆ " ಸೋಮವಾರ ಸಂಜೆ ಮುನ್ನಿ ಲಾಲ್ ಬ್ಯಾಂಕ್ ಗೆ ಬಂದಾಗ ನಮ್ಮ ಶಾಖೆಯಲ್ಲಿ ಹಣ ಮುಗಿದಿತ್ತು.ಹಾಗಾಗಿ ನಾವು ಮರುದಿನ ಶಾಖೆಗೆ ಹಣ ಬಂದ ತಕ್ಷಣ ಮುನ್ನಿಲಾಲ್ ಗೆ ನೀಡಿದ್ದೇವೆ"ಎಂದು ವಿವರಿಸುತ್ತಾರೆ.
ಘಟನೆ ಬಗ್ಗೆ ತನಿಖೆ ನಡೆಸುವಂತೆ ಗೌತಮ ಬುದ್ದ ನಗರದ ಜಿಲ್ಲಾ ನ್ಯಾಯಾಧಿಕಾರಿ ಎನ್.ಪಿ.ಸಿಂಗ್ ಸ್ಥಳೀಯ ಆಡಳಿತಕ್ಕೆ ಆದೇಶಿಸಿದ್ದಾರೆ.
No comments