ರಣಜಿಯಲ್ಲಿ ಸೋಲಿನ ದವಡೆಯಿಂದ ಪಾರಾದ ಕರ್ನಾಟಕ ತಂಡ
ನವದೆಹಲಿ - ಸಿ.ಎಂ.ಗೌತಮ್ ಹಾಗೂ ಶ್ರೇಯಾಸ್ ಗೋಪಾಲ್‍ರ ಆಕರ್ಷಕ ಆಟದ ನೆರವಿನಿಂದ ಒಡಿಸ್ಸಾ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ವಿನಯ್‍ಕುಮಾರ್ ಸಾರಥ್ಯದ ಕರ್ನಾಟಕ ತಂಡವು ಸೋಲಿನ ದವಡೆಯಿಂದ ಪಾರಾಗುವತ್ತ ದಾಪುಗಾಲಿಟ್ಟಿದೆ. ಮೊದಲ ಇನ್ನಿಂಗ್ಸ್‍ನಲ್ಲಿ ಮುನ್ನಡೆ ಪಡೆದ ಆಧಾರದ ಮೇಲೆ ಒಡಿಸ್ಸಾಗೆ 3 ಅಂಕಗಳು ಲಭಿಸಲಿದೆ.. ಇಂದು ಪಂದ್ಯದ ಅಂತಿಮ ದಿನವಾಗಿದ್ದರಿಂದ ಪಂದ್ಯವು ಭಾರೀ ಕುತೂಹಲವನ್ನು ಮೂಡಿಸಿತು.
ಸಿ.ಎಂ. ಗೌತಮ್- ಶ್ರೇಯಾಸ್ ಗೋಪಾಲ್ ಅಬ್ಬರ:
ಪಂದ್ಯದ 3ನೆ ದಿನದ ಅಂತ್ಯಕ್ಕೆ 244 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಸಿ.ಎಂ. ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಅವರು ಉತ್ತಮ ಸಾಥ್ ನೀಡಿದರು. ನಿನ್ನೆ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಗೌತಮ್ ಇಂದು ಬೆಳಗಿನ ಪಾಳೆಯದಲ್ಲೇ ಒಡಿಸ್ಸಾ ಬೌಲರ್‍ಗಳನ್ನು ದಂಡಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ನಾಯಕ ಪೋ ಡಾರ್ ಮಾಡಿದ ಎಲ್ಲ ತಂತ್ರಗಳು ಫಲ ನೀಡಲಿಲ್ಲ. ಆಗ ಸೂರ್ಯಕಾಂತ್ ಪ್ರಧಾನ್ ಒಡಿಸ್ಸಾ ತಂಡಕ್ಕೆ ನೆರವಾದರು. ಶತಕದ ಅಂಚಿನಲ್ಲಿ ದ್ದ ಸಿ.ಎಂ.ಗೌತಮ್ (95 ರನ್, 5 ಬೌಂಡರಿ, 1 ಸಿಕ್ಸರ್) 101 ಓವರ್‍ನ ಕೊನೆಯ ಎಸೆತದಲ್ಲಿ ಸೌರವ್ ರವಾತ್‍ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆಗ ತಂಡದ ಮೊತ್ತ 300 ರನ್ ಗಳಿಸಿತ್ತು.
ಗೌತಮ್- ಶ್ರೇಯಾಸ್ ಮಿಂಚು:
ವಿಕೆಟ್ ಕೀಪರ್ ಸಿ.ಎಂ.ಗೌತಮ್ ಔಟಾದ ನಂತರ ಕ್ರೀಸ್‍ಗೆ ಇಳಿದ ಯುವ ಆಟಗಾರ ಕೆ.ಗೌತಮ್, ಶ್ರೇಯಾಸ್ ಗೋಪಾಲ್‍ರೊಂದಿಗೆ ಒಡಗೂಡಿ ಒಡಿಸ್ಸಾದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿದರು. ಭೋಜನ ವಿರಾಮದ ವೇಳೆಗೆ ಈ ಜೋಡಿಯು 75 ರನ್‍ಗಳ ಜೊತೆಯಾಟ ನೀಡಿದ್ದು , ಶ್ರೇಯಾಸ್ ಗೋಪಾಲ್ (70 ರನ್, 3 ಬೌಂಡರಿ) ಹಾಗೂ ಕೆ.ಗೌತಮ್ (34 ರನ್, 3 ಬೌಂಡರಿ) ಕ್ರೀಸ್‍ನಲ್ಲಿದ್ದರು. ಕರ್ನಾಟಕ 208 ರನ್‍ಗಳ ಮುನ್ನಡೆಯನ್ನು ಗಳಿಸಿಕೊಂಡು ಇನ್ನೂ ಮೂರು ವಿಕೆಟ್‍ಗಳು ಉಳಿದಿರುವುದರಿಂದ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವುದು ಬಹುತೇಕ ಖಚಿತವಾಗಿದೆ.
No comments