ಕಾರ್ಕಳ ಪುರಸಭೆಯಲ್ಲಿ ಸದಸ್ಯರ ನಡುವೆ ಮಾರಾಮಾರಿ
ವಿಪಕ್ಷ ಕಾಂಗ್ರೆಸ್ ಪುರಸಭಾ ಸದಸ್ಯ ಶುಭದ್ ರಾವ್ ತನ್ನ ಸಂಬಂಧಿ ಆಡಳಿತ ಪಕ್ಷ ಬಿಜೆಪಿಯ ಪ್ರಕಾಶ್ ರಾವ್ ಮೇಲೆ ಸಭೆಯ ಕಲಾಪದ ವೇಳೆಯೇ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಪ್ರಕಾಶ್ ರಾವ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಬುಧವಾರ ಬೆಳಗ್ಗೆ ಪುರಸಭಾಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆಯಲ್ಲಿ ಆರಂಭವಾದ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕುರಿತ ಚರ್ಚೆಗಳು ನಡೆದವು. ಬಳಿಕ ಹಲವು ಮಹತ್ವದ ಅಜೆಂಡಾಗಳ ಚರ್ಚೆಯ ಹಿನ್ನೆಲೆಯಲ್ಲಿ ಸಭೆಯನ್ನು ಮಧ್ಯಾಹ್ನದ ಬಳಿಕವೂ ಮುಂದುವರಿಸಲಾಗಿತ್ತು.
ಅನುದಾನ ಹಂಚಿಕೆ ಕುರಿತಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಚರ್ಚೆಗಳಾಗುತ್ತಿದ್ದಂತೆಯೇ ವಿಪಕ್ಷ ಕಾಂಗ್ರೆಸ್ಸಿನ ಶುಭದ್ ರಾವ್ ಹಾಗೂ ಆಡಳಿತ ಬಿಜೆಪಿಯ ಪ್ರಕಾಶ್ ರಾವ್ ನಡುವೆ ಸಭೆಯ ಕಲಾಪದ ನಡುವೆ ಮಾತಿಗೆ ಮಾತು ಬೆಳೆದು ಈ ವೇಳೆ ಶುಭದ್ ರಾವ್ ಏಕಾಏಕಿ ಪ್ರಕಾಶ್ ರಾವ್ ಕಡೆಗೆ ನುಗ್ಗಿ ಬಂದು ಹಲ್ಲೆ ನಡೆಸಿ, “ನಿನ್ನನ್ನು ರಾತ್ರಿಯೊಳಗೆ ತಲವಾರಿನಿಂದ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ” ಎಂದು ಹೇಳಲಾಗಿದೆ.
ಈ ಘಟನೆಯ ಸತ್ಯಾಸತ್ಯತೆಯನ್ನು ಅರಿಯಲು ಪೊಲೀಸರು ಸೀಸಿ ಕ್ಯಾಮರಾ ದೃಶ್ಯಗಳನ್ನು ಪಡೆದು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
Source karavali-ale
No comments