Breaking News

ಕಾಮಧೇನು ಎಲ್ಲಿರುತ್ತಾಳೋ ಅದೇ ಸ್ವರ್ಗ - ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

ಡಿಸೆಂಬರ್ , ಇಂಡಿ : ದೇಶವೆಲ್ಲಾ ಕತ್ತಲಾದಾಗ, ಬದುಕೆಲ್ಲಾ ಕತ್ತಲಾದಾಗ , ಬೆಳಕು ಸಿಗುವುದು ಗೋವಿನಲ್ಲಿ ಮಾತ್ರ. ಯಜ್ಞದಲ್ಲಿ ಅರ್ಪಿತ ಹವಿಸ್ಸನ್ನು ದೇವರು ಪ್ರತ್ಯಕ್ಷವಾಗಿ ಸ್ವೀಕರಿಸುವ ಮಾರ್ಗವಿದ್ದಲ್ಲಿ ಅದು ಗೋವಿನಿಂದ ಮಾತ್ರ. ಹಾಗಾಗಿ ಗೋವಿಗೆ ಮೇವು ಕೊಟ್ಟರೆ ಅಶ್ವಮೇಧ ಯಜ್ಞಕ್ಕೆ ಸಮ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀಸಂಸ್ಥಾನ ಗೋಕರ್ಣ,ರಾಮಚಂದ್ರಾಪುರಮಠ ಇವರು ಅಭಿಪ್ರಾಯಪಟ್ಟರು.
ಇಂಡಿಯ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ಮಂಗಲಗೋಯಾತ್ರೆಯ ಅಂಗವಾಗಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಸ್ವರ್ಗದಲ್ಲಿ ಅಮೃತವನ್ನು ಹುಡುಕಬೇಡಿ. ಗೋವಿನಲ್ಲೇ ಅಮೃತವಿದೆ‌. ಕಾಮಧೇನು ಎಲ್ಲಿರುತ್ತಾಳೋ ಅದೇ ಸ್ವರ್ಗವಾಗುತ್ತದೆ. ನಮ್ಮ ಮನೆ, ನಮ್ಮ ಊರು, ನಮ್ಮ ದೇಶ ಎಲ್ಲವೂ ಗೋವಿನಿಂದ ಸ್ವರ್ಗವಾಗಲು ಸಾಧ್ಯವಿದೆ. ದೇವರು, ದೇವಸ್ಥಾನ ಬೇರೆ ಕಡೆಗೆ ಹುಡುಕಬೇಕಿಲ್ಲ. ಗೋವೇ ಒಂದು ಸಂಚಾರಿ ದೇವಾಲಯ ಎಂದರು.
ಒಂದು ಕಾಲದಲ್ಲಿ ಗೋವನ್ನೇ ಶ್ರೀಮಂತಿಕೆಯ ಮಾಪಕವಾಗಿ ತಿಳಿಯಲಾಗುತ್ತಿತ್ತು. ಆಗ ಗೋವನ್ನು ಕಪ್ಪುಹಣವಾಗಿಯಾಗಲೀ, ನಕಲಿ ನೋಟುಗಳಾಗಿಯಾಗಲೀ ಬಳಸಲು ಸಾಧ್ಯವಿರಲಿಲ್ಲ. ದುರಾದೃಷ್ಟವಶಾತ್ ಇಂದು ಗೋವಿರುವ ಮನೆಗೆ ಹೆಣ್ಣು ಕೊಡುವುದಿಲ್ಲ ಎನ್ನುವ ಸ್ಥಿತಿ ಬಂದುಬಿಟ್ಟಿದೆ ಎಂದರು.
ಗೋವು ಶುದ್ಧತೆಯ ಪ್ರತೀಕ. ಅಂತಹಾ ಗೋವುಗಳನ್ನೇ ತಳಿಸಂಕರದ ಮೂಲಕ ಕೆಡಿಸುವ ಪ್ರಯತ್ನ ಮಾನವರಿಂದ ನೆಡೆಯುತ್ತಿದೆ. ಒಂದು ಗೋವಿನ ಕತ್ತಿಗೆ ಕತ್ತಿ ಬೀಳದಿದ್ದರೆ ಅದೇ ಸಂತರಿಗೆ ಹಾಕುವ ಸಾವಿರ ಮಾಲಿಕೆ, ಗೋರಕ್ಷಣೆಗೆ ನಿಮ್ಮೆಲ್ಲರ ಮನ ನೀಡಿದರೆ ಅದೇ ಸಂತರಿಗೆ ನೀಡುವ ಕಾಣಿಕೆ ಎಂದರು.
ಸ್ವಾರ್ಥವಿಲ್ಲದ ಮಾತೆ - ಗೋಮಾತೆ
ಸ್ವಾರ್ಥವಿಲ್ಲದ ಮಾತೃತ್ವ ತೋರುವ ಗೋಮಾತೆ, ನಮ್ಮ ತಾಯಿಗಿಂತ ಮೊದಲ ತಾಯಿ. ಭೂಮಿತಾಯಿಗೆ ಅನ್ನವಿತ್ತವಳು ಗೋಮಾತೆ. ಹಾಗಾಗಿ ಈ ಆಂದೋಲನವಿರುವುದು ಗೋರಕ್ತದ ಕಳಂಕವಿರುವ, ಈ ಸೂತಕದ ಭಾಗಿಗಳಾದ ನಮ್ಮೆಲ್ಲರನ್ನು ಗೋವಿಗಾಗಿ ಸರ್ವತ್ಯಾಗಕ್ಕೆ ಸನ್ನದ್ಧರಾಗಿಸುವ ಸಲುವಾಗಿ. ಇದಕ್ಕಾಗಿ ಎಂತಹಾ ಆಪತ್ತುಗಳು ಬಂದರೂ ಎದುರಿಸಲು ಸಿದ್ಧ ಎಂದರು.
ಅಗ್ನಿಕ್ಷಿಪಣಿ ಉಡಾವಣೆಯಾಗಿರುವುದು ಹೊರಗಿನ ಶಕ್ತಿಗಳಿಗೆ ಸಾಕು. ಆದರೆ ನಮ್ಮ ಒಳಗಿನ ದುಷ್ಟ ಶಕ್ತಿಗಳಿಗೆ ಈ ಅಗ್ನಿಕ್ಷಿಪಣಿಗಳಿಗಿಂತಾ ದೊಡ್ಡ ಅಗ್ನಿ ಬೇಕಾಗಿದೆ. ಇದರ ಸಲುವಾಗಿಯೇ ಗೋಸಂರಕ್ಷಣೆಗಾಗಿ ಹೊತ್ತಿರುವ ಕಿಚ್ಚು ಮಂಗಲಗೋಯಾತ್ರೆ ಎಂದು ಗೋಸಂದೇಶ ನೀಡಿದರು.
ಓಂಕಾರೇಶ್ವರಮಠದ ಡಾ.ಸ್ವರೂಪಾನಂದ ಸ್ವಾಮಿಗಳು ಮಾತನಾಡಿ, ಮನುಕುಲದ ಮಾತೆ ಗೋಮಾತೆ. ಗೋವುಗಳ ರಕ್ಷಣೆಯಾದರೆ ಮಾತ್ರ ಆರೋಗ್ಯವಂತ ಬದುಕು ಸಾಧ್ಯ. ಗೋವಿಗೆ ರಾಷ್ಟ್ರೀಯ ಮಾನ್ಯತೆಯನ್ನೂ ಒದಗಿಸಬೇಕಿದೆ. ಗೋವಿನ ಎಲ್ಲಾ ಉತ್ಪನ್ನಗಳೂ ಅರೋಗ್ಯದಾಯಕ. ಇಂದಿನ ಶೋಚನೀಯ ಸ್ಥಿತಿ ಎಂದರೆ ಸರ್ಕಾರಗಳೇ ಮುಂದೆ ನಿಂತು ಕಸಾಯಿಖಾನೆಗಳಿಗೆ ಅನುಮತಿ ನೀಡುತ್ತಿವೆ. ಇದನ್ನು ತಡೆಯಬೇಕಿದೆ‌. ಅದಕ್ಕಾಗಿ ಶಂಕರಾಚಾರ್ಯರಂತೆ ರಾಘವೇಶ್ವರ ಶ್ರೀಗಳು ಕೂಡಾ ಮಹತ್ತರ ಕಾರ್ಯವೆಸಗುತ್ತಿದ್ದಾರೆ. ಹಾಗಾಗಿ ಗೋರಕ್ಷಣೆಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಶ್ರೀಅಭಿನವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಬುದ್ಧ ಮನೆಬಿಟ್ಟ ಘಳಿಗೆ, ಪೈಗಂಬರರಿಗೆ ದೇವವಾಣಿ ಕೇಳಿದ ಘಳಿಗೆ, ಕ್ರಿಸ್ತನನ್ನು ಶಿಲುಬೆಗೇರಿಸಿದ ಘಳಿಗೆ, ಸಾಕ್ರೆಟಿಸ್ ವಿಷ ಕುಡಿದ ಘಳಿಗೆ, ಹಾಗೆಯೇ ರಾಘವೇಶ್ವರ ಶ್ರೀಗಳಿಗೆ ಮಹಾನಂದಿ ಸಿಕ್ಕಿದ ಘಳಿಗೆ ಇವೆಲ್ಲ ಘಳಿಗೆಗಳೂ ಶತಮಾನಗಳಿಗೆ ಸಾಟಿ. ಅದಕ್ಕಾಗಿಯೇ ಮಂಗಲಗೋಯಾತ್ರೆ ಉದ್ಭವವಾಗಿದೆ. ನಾವಿಂದು ಗೋವುಗಳನ್ನು ಕಸಾಯಿಖಾನೆಗೆ ಕಳಿಸುತ್ತಿದ್ದರೂ ನೋಡುತ್ತಾ ಸುಮ್ಮನಿರುತ್ತಿದ್ದೇವೆ. ಇದನ್ನು ತಡೆಯಲೋಸುಗ ಹುಟ್ಟಿರುವ ಮಂಗಲಗೋಯಾತ್ರೆಯ ಆಶಯಗಳನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು. ಅದಕ್ಕಾಗಿ ಗೋಯಾತ್ರೆಯ ಆಶಯವನ್ನು ಪ್ರತಿಯೊಬ್ಬರೂ ಧರಿಸಿ ಇನ್ನೋರ್ವರಿಗೂ ತಿಳಿಸುವ ಮನ ಮಾಡಬೇಕು. ಆಗ ಮಾತ್ರ ಗೋಹತ್ಯೆ ನಿಷೇಧ ಸಾಧ್ಯ ಎಂದರು.
ಶ್ರೀಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಪ್ರದೋಷ ನಿವಾರಣೆಗೆ, ಅನಿಷ್ಟ ನಿವಾರಣೆಗೆ ಹಾಗೂ ಎಲ್ಲಾ ವಿಧದ ಪೂಜೆಗಳಿಗೆ ಗೋವು ಅತ್ಯವಶ್ಯವಾಗಿದೆ. ಇಂತಹಾ ಗೋವನ್ನು ಪ್ರತಿನಿತ್ಯ ಹೃನ್ಮನದಲ್ಲಿ ಸ್ಮರಿಸಿ, ಗೋಸಂತತಿ ಉಳಿಸುವಲ್ಲಿ ಸರ್ವರ ಸಹಕಾರ ಬೇಕಾಗಿದೆ ಎಂದರು.
ಗೋಸಾಧಕರಾದ ಉಮಾಪತಿ ಮೂದಲಿಯಾರ್, ರಘೂತ್ತಮ ಆಚಾರ್ ರವರನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮಂಗಲವಾದ್ಯಗಳೊಡಗೂಡಿದ ಭವ್ಯ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನೆಡೆಯಿತು.
ಈ ಸಂದರ್ಭದಲ್ಲಿ ಪೂಜ್ಯರಾದ ರೇಣುಕಾಚಾರ್ಯ ಶಿವಾಚಾರ್ಯ ಸ್ವಾಮಿಗಳು, ಸಿದ್ಧರಾಮ ಸ್ವಾಮಿಗಳು,  ಹಾಗೂ ಗೋಪ್ರೇಮಿಗಳಾದ ಮುತ್ತುರಾಜ್ ದೇಸಾಯಿ, ಸತೀಶ್ಚಂದ್ರ ದೇಸಾಯಿ, ಶಿವಕುಮಾರ್, ಚಿದಾನಂದ್ ಕುಲಕರ್ಣಿ, ಪ್ರವೀಣ್ ತಂಬೆ, ಭೀಮನಗೌಡ ಪಾಟೀಲ್, ಶ್ರೀಶೈಲ್ ಗೌಡ ಬಿರಾದಾರ್, ಶ್ರೀಕಾಂತ್ ದೇವರ ಇನ್ನಿತರರು ಉಪಸ್ಥಿತರಿದ್ದರು.


No comments