Breaking News

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ನುಡಿಸಿಲ್ಲ ಎಂದು ಸಿನಿಮಾ ನೋಡದೆ ಹೊರನಡೆದ ಭಾರತೀಯ ಮಹಿಳಾ ಹಾಕಿ ಕ್ಯಾಪ್ಟನ್.

ಹರಿದ್ವಾರ : ಸುಪ್ರೀಂಕೋರ್ಟ್ ಭಾರತೀಯ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಪ್ರಾರಂಭಕ್ಕೆ ಮೊದಲು ರಾಷ್ಟ್ರಗೀತೆ ಮೊಳಗಿಸಬೇಕು ಎಂಬ ಆಜ್ಞೆ ಹೊರಡಿಸಿದ್ದರೂ ಕೂಡ ಕೆಲವು ಚಿತ್ರಮಂದಿರಗಳು ಇನ್ನೂ ಆಜ್ಞೆಯನ್ನು ಪಾಲಿಸುತ್ತಿಲ್ಲ.

ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ವಂದನಾ ಕಠಾರಿಯಾ ಹರಿದ್ವಾರದ ಮಾಲ್ ಒಂದರ ಸಿನಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರಾರಂಭಕ್ಕೆ ಮೊದಲು ರಾಷ್ಟ್ರಗೀತೆ ನುಡಿಸಲಿಲ್ಲ ಎಂಬ ಕಾರಣಕ್ಕೆ ಸಿನಿಮಾ ನೋಡದೆ ಪ್ರಾರಂಭದಲ್ಲೇ ಚಿತ್ರಮಂದಿರದಿಂದ ಹೊರ ಬಂದ ಘಟನೆ ನಡೆದಿದೆ.

ಆಸ್ಟ್ರೇಲಿಯಾದಲ್ಲಿ ಹಾಕಿ ಪಂದ್ಯಾಟ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದ ಭಾರತೀಯ ಹಾಕಿ ತಂಡದ ನಾಯಕಿ 'ವಂದನ' ಬುಧವಾರ ಹರಿದ್ವಾರದ ಪ್ರತಿಷ್ಠಿತ ಮಾಲ್ ಒಂದರ ಸಿನಿಪ್ಲೆಕ್ಸ್ ಚಿತ್ರ ಮಂದಿರಕ್ಕೆ ಶಾರುಖ್ ಖಾನ್ ಹಾಗೂ ಆಲಿಯ ಭಟ್ ಅಭಿನಯದ 'ಡಿಯರ್ ಜಿಂದಗಿ' ಸಿನಿಮಾ ನೋಡಲು ತೆರಳಿದ್ದರು. ಆದರೆ ಸಿನಿಮಾ ಪ್ರಾರಂಭವಾದರೂ ಚಿತ್ರಮಂದಿರದಲ್ಲಿ ಸುಪ್ರೀಂಕೋರ್ಟ್ ಆಜ್ಞೆಯಂತೆ ರಾಷ್ಟ್ರಗೀತೆ ನುಡಿಸಲಿಲ್ಲ, ಇದರಿಂದ ಕೋಪಗೊಂಡ ವಂದನಾ ಸಿನಿಮಾ ಮಂದಿರದ ಹೊರಬಂದು ಸಿನಿಪ್ಲೆಕ್ಸ್  ಚಿತ್ರಮಂದಿರದ ಅಧಿಕಾರಿ ಸಂಜೀವ್ ಕುಮಾರ್ ಬಳಿ ಈ ಕುರಿತು ಪ್ರಶ್ನಿಸಿದರು.

ಆದರೆ ಸಂಜೀವ್ ಕುಮಾರ್ 'ನಮಗೆ ಸುಪ್ರೀಂಕೋರ್ಟಿನಿಂದ ಯಾವುದೇ ರೀತಿಯ ಲಿಖಿತ ಆಜ್ಞೆ ಬಂದಿಲ್ಲ, ಹಾಗಾಗಿ ನಾವು ರಾಷ್ಟ್ರಗೀತೆ ನುಡಿಸಿಲ್ಲ' ಎಂಬ ಉತ್ತರ ಕೊಟ್ಟರು. ಈ ಉತ್ತರದಿಂದ ಮತ್ತಷ್ಟು ಕೋಪಗೊಂಡ ವಂದನಾ 'ಯಾರು ದೇಶದ ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವರೋ ಅಂಥವರು ಸುಪ್ರೀಂಕೋರ್ಟಿನ ಲಿಖಿತ ಆಜ್ಞೆಗೆ ಕಾಯಲ್ಲ . ಯಾರು ರಾಷ್ಟ್ರೀಯ ಚಿನ್ಹೆಗಳಿಗೆ ಗೌರವ ಸೂಚಿಸುವುದಿಲ್ಲವೊ ಅಂಥವರು ಭಾರತೀಯರು ಅನ್ನಿಸಿಕೊಳ್ಳಲು ಸೂಕ್ತರಲ್ಲ' ಎಂದು ಹೇಳಿ ಸಿನಿಮಾ ಮಂದಿರದಿಂದ ಸಿನಿಮಾ ನೋಡದೆ ಹೊರನಡೆದರು.

No comments