Breaking News

ಯುವಕನ ಮೊಬೈಲ್ ವ್ಯಾಮೋಹಕ್ಕೆ ಫ್ಲಿಪ್-ಕಾರ್ಟ್ ಡೆಲಿವರಿ ಬಾಯ್ ಬಲಿ.

ಬೆಂಗಳೂರು : ಬೆಂಗಳೂರಿನ ವಿಜಯನಗರದ ಜಿಮ್ ಒಂದರಲ್ಲಿ ಫ್ಲಿಪ್-ಕಾರ್ಟ್ ಕಂಪನಿಯ ಉತ್ಪನ್ನಗಳನ್ನು ವಿತರಣೆ ಮಾಡುವ 29 ವರ್ಷದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಂಜುಂಡ ಸ್ವಾಮಿ (29) ಪ್ಲಿಫ್-ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಮಾಡುತ್ತಿದ್ದು ಎಂದಿನಂತೆ ವಿಜಯನಗರ ಬಳಿಯ ಜಿಮ್ ಒಂದಕ್ಕೆ ಮೊಬೈಲ್ ಡೆಲಿವರಿ ಮಾಡಲು ತೆರಳಿದ್ದ. ಆದರೆ ಮೊಬೈಲ್ ಬುಕ್ ಮಾಡಿದ್ದ ಜಿಮ್ ತರಬೇತುದಾರ ವರುಣ್ (22) ಬಳಿ ಮೊಬೈಲ್ ಪಡೆಯಲು ಹಣವಿರಲಿಲ್ಲ.ಹೀಗಾಗಿ ನಂಜುಂಡ ಸ್ವಾಮಿಯ ಹತ್ಯೆ ಮಾಡಿ ಮೊಬೈಲ್ ಪಡೆದುಕೊಳ್ಳುವ ಘೋರ ಕೃತ್ಯಕ್ಕೆ ಕೈಹಾಕಿದ್ದಾನೆ.
ವರುಣ್ ಹತ್ತು ದಿನಗಳ ಹಿಂದಷ್ಟೇ ಜಿಮ್ ತರಬೇತುದಾರನಾಗಿ ಕೆಲಸಕ್ಕೆ ಸೇರಿದ್ದು, ಜಿಮ್'ನ ತನ್ನ ಗೆಳೆಯರು ಹಾಗೂ ಗ್ರಾಹಕರ ಬಳಿ ಮೊಬೈಲ್ ಇರುವುದನ್ನು ಕಂಡು ತಾನೂ ಮೊಬೈಲ್ ಖರೀದಿಸಬೇಕೆಂದು ಯೋಚಿಸಿದ್ದ, ಈ ಬಗ್ಗೆ ತಂದೆಯಲ್ಲಿ ಹಣ ಕೇಳಿದಾಗ ಅವರು ಹಣ ನೀಡಲು ನಿರಾಕರಿಸಿದರು.ಹೇಗಾದರು ಮೊಬೈಲ್ ಖರೀದಿಸಬೇಕು ಅಂದುಕೊಂಡ ವರುಣ್ ಡೆಲಿವರಿ ಬಾಯ್ ಕೊಲೆಗೆ ಸಂಚುರೂಪಿಸಿದ. 
ಡಿಸಂಬರ್ 8ರಂದು ಮೊಬೈಲ್ ಬುಕ್ ಮಾಡಿದ ವರುಣ್ ಡೆಲಿವರಿಗೆ ಜಿಮ್ ನ ವಿಳಾಸ ಹಾಗೂ ಪೋನ್ ನಂಬರ್ ನೀಡಿದ್ದ. ಡಿಸಂಬರ್ 9ರಂದು ಮಧ್ಯಾಹ್ನ 12:30ರ ಸುಮಾರಿಗೆ ಜಿಮ್'ಗೆ ಮೊಬೈಲ್ ಡೆಲಿವರಿ ಮಾಡಲು ಬಂದ ನಂಜುಂಡ ಸ್ವಾಮಿಯನ್ನು ವರುಣ್ ಜಿಮ್ ಕೊಠಡಿಗೆ ಕರೆಸಿಕೊಳ್ಳುತ್ತಾನೆ. ಕೊಠಡಿಗೆ ಬಂದ ನಂಜುಂಡ ಸ್ವಾಮಿಯಿಂದ ವರುಣ್ ಮೊಬೈಲ್ ಕಸಿಯಲು ಯತ್ನಿಸುತ್ತಾನೆ, ಆದರೆ ನಂಜುಂಡ ಸ್ವಾಮಿ ಅಲ್ಲಿಂದ ತಪ್ಪಿಸಿಕೊಂಡಾಗ ವರುಣ್ ಅಲ್ಲೇ ಇದ್ದ ಹೂಕುಂಡದಿಂದ ನಂಜುಂಡ ಸ್ವಾಮಿ ತಲೆಗೆ ಹೊಡೆಯುತ್ತಾನೆ ಮತ್ತು ತಾನು ಮೊದಲೆ ತಂದಿಟ್ಟುಕೊಂಡಿದ್ದ ಚಾಕುವಿನಿಂದ ನಂಜುಂಡ ಸ್ವಾಮಿ ಹೊಟ್ಟೆಗೆ ಇರಿದು, ಸಾಯೋವರೆಗೆ ಅಲ್ಲೇ ಕಾಯುತ್ತಾನೆ. ಆದರೆ ತಕ್ಷಣಕ್ಕೆ ಹೆಣವನ್ನು ಸಾಗಿಸಲು ಆತನಿಂದ ಸಾಧ್ಯವಾಗುವುದಿಲ್ಲ ಹಾಗಾಗಿ ರಾತ್ರಿವರೆಗೆ ಹೆಣವನ್ನು ಜಿಮ್'ನಲ್ಲೇ ಇಟ್ಟುಕೊಂಡು ರಾತ್ರಿ ಕಟ್ಟಡದ ಲಿಪ್ಟ್ ಸಂಧಿಗೆ ಹಾಕಿ ನಂಜುಂಡ ಸ್ವಾಮಿ ಬಳಿ ಇದ್ದ ಹಣ ಹಾಗೂ ಎರಡು ಮೊಬೈಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ.
ಘಟನೆ ನಡೆದು ಎರಡು ದಿನಗಳ ನಂತರ ನಂಜುಂಡ ಸ್ವಾಮಿ ಹೆತ್ತವರು ಮಗ ಕಾಣೆಯಾಗಿರುವುದಾಗಿ ಬ್ಯಾಟರಸಂದ್ರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಇತ್ತ ಅದೇ ಸಮಯಕ್ಕೆ ವಿಜಯನಗರದ ಜಿಮ್ ಕಟ್ಟಡದ ಲಿಫ್ಟ್ ಸಂದಿಯಲ್ಲಿ ನಂಜುಂಡ ಸ್ವಾಮಿ ಮೃತದೇಹ ಪತ್ತೆಯಾಗುತ್ತೆ. ಆದರೆ ಮೊದಲಿಗೆ ಪೋಲೀಸರಿಗೆ ಮೃತದೇಹದ ಗುರುತು ಪತ್ತೆಯಾಗಿರುವುದಿಲ್ಲ. 
ತನಿಖೆ ಕೈಗೆತ್ತಿಕೊಂಡ ಪೋಲೀಸರು ಪ್ಲಿಫ್-ಕಾರ್ಟ್ ಸಂಸ್ಥೆಯಲ್ಲಿ ವಿಚಾರಿಸಿದಾಗ, ನಂಜುಂಡ ಸ್ವಾಮಿ ವಿಜಯನಗರದ ಜಿಮ್ ಒಂದರ ಗ್ರಾಹಕರೊಬ್ಬರಿಗೆ ಮೊಬೈಲ್ ನೀಡಲು ತೆರಳಿದ ನಂತರ ನಾಪತ್ತೆಯಾಗಿರುವುದು ಗೊತ್ತಾಗುತ್ತೆ. ಸ್ವಾಮಿ ಮೃತದೇಹ ಕೂಡ ಡೆಲಿವರಿ ನೀಡಲು ತೆರಳಿದ ಅದೇ ಕಟ್ಟಡದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಜಿಮ್ ಗ್ರಾಹಕರಲ್ಲಿ ವಿಚಾರಿಸಿದಾಗ ಘಟನೆ ನಡೆದ ದಿನದಿಂದ ಜಿಮ್ ತೆರೆಯದಿರುವುದು ಪೊಲೀಸರಿಗೆ ತಿಳಿದು ಬರುತ್ತೆ. ಹೀಗಾಗಿ ಜಿಮ್ ತರಬೇತುದಾರ ವರುಣ್ ಮೇಲೆ ಸಂಶಯಗೊಂಡ ಪೋಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದ.ಮೊಬೈಲ್ ಮೇಲಿನ ವ್ಯಾಮೋಹಕ್ಕೆ ಕೊಲೆಮಾಡಿ ವರುಣ್ ಈಗ ಜೈಲು ಪಾಲಾಗಿದ್ದಾನೆ.

No comments