Breaking News

ಮೋದಿ ಟಿಆರ್‌ಪಿ ರಾಜಕಾರಣಿ : ರಾಹುಲ್


ನವದೆಹಲಿ, : ಐನೂರು ಮತ್ತು ಸಾವಿರ  ಮುಖಬೆಲೆಯ ನೋಟು ನಿಷೇಧ ನಿರ್ಧಾರದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಅವರು ಟಿಆರ್‌ಪಿ ರಾಜಕಾರಣ ಮಾಡುತ್ತಿದ್ದಾರೆ. ಅವರ ಸ್ವ ಪ್ರತಿಷ್ಠೆ ಹಾಗೂ ಅದಕ್ಷತೆಯಿಂದಾಗಿ ದೇಶಕ್ಕೆ ಬಹುದೊಡ್ಡ ಹಾನಿಯಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷ(ಸಿಪಿಪಿ)ದ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ಅವರು ತಮ್ಮ ಸ್ವಂತ ವರ್ಚಸ್ಸು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ದೇಶದ ಜನರು ಸಂಕಷ್ಟಕ್ಕೊಳಗಾಗುವಂತೆ ಮಾಡಿದ್ದಾರೆ. ವಿರೋಧ ಪಕ್ಷದ ಮಾತನ್ನು ಕೇಳುವ ವ್ಯವದಾನ ಅವರಿಗಿಲ್ಲ. ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸಂಸದರ ಮಾತನ್ನೇ ಕೇಳುವ ಸ್ಥಿತಿಯಲ್ಲಿ ಮೋದಿ ಅವರಿಲ್ಲ. ಅವರು ಈಗ ಮಾಡುತ್ತಿರುವ ತಪ್ಪು ನೀತಿಗಳು ದುರಂತಮಯವಾಗಲಿವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸ್ವಂತ ವರ್ಚಸ್ಸನ್ನು ಕತ್ತಲಲ್ಲಿ ಇಟ್ಟಿರುವ ಪ್ರಧಾನಿಯೊಬ್ಬರ ಕೈಗೆ ಭಾರತವನ್ನು ಕಾಂಗ್ರೆಸ್ ಒಪ್ಪಿಸುವುದಿಲ್ಲ. ಜನರು ಸಂಕಷ್ಟಕ್ಕೊಳಗಾಗುವಂತೆ ಮಾಡಿರುವ ಇಂತಹವರ ವಿರುದ್ಧ ಸಂಘರ್ಷಕ್ಕೆ ಪಕ್ಷ ಸಿದ್ಧವಿದೆ. ದೇಶದ ನೀತಿಗಳನ್ನು ತಮ್ಮ ಟಿಆರ್‌ಪಿಯ ತಂತ್ರಗಳಿಗೆ ಬಳಸುವವರ ಕೈಗೆ ದೇಶವನ್ನು ಒತ್ತೆ ಇಡುವುದಿಲ್ಲ ಎಂದು ರಾಹುಲ್ ಹರಿಹಾಯ್ದಿದ್ದಾರೆ.

No comments