Breaking News

ಅಮೆರಿಕದ 45ನೇ ಅಧ್ಯಕ್ಷ ಟ್ರಂಪ್‌ ಪ್ರಮಾಣ ಸ್ವೀಕರಿಸಿ ಹೇಳಿದ್ದೇನು


ಅಮೆರಿಕದ 45ನೇ ರಾಷ್ಟ್ರಾಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ಕಾಲಮಾನ ರಾತ್ರಿ 10.30 ಗಂಟೆಗೆ ಡೊನಾಲ್ಡ್ ಟ್ರಂಪ್ ಅಮೇರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಂಟು ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್‌, ‘ಅಧಿಕಾರವನ್ನು ವಾಷಿಂಗ್ಟನ್‌ ಡಿ.ಸಿಯಿಂದ ದೇಶದ ಇತರ ಭಾಗಗಳ ಜನರ ಕೈಗೆ ಮರಳಿಸುತ್ತಿದ್ದೇವೆ’ ಎಂದು ಹೇಳಿದರು.
ಅಮೆರಿಕ ಮೊದಲು ಎಂಬುದೇ ನಮ್ಮ ನೀತಿ. ಇಂದಿನಿಂದ ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಅಮೆರಿಕದ ಕೆಲಸಗಾರರು ಮತ್ತು ಅವರ ಕುಟುಂಬಕ್ಕೆ ಪ್ರಯೋಜನ ಉಂಟುಮಾಡುವಂಥದ್ದಾಗಿರುತ್ತದೆ’
ತಮ್ಮ ಚುನಾವಣಾ ಪ್ರಚಾರ ಭಾಷಣಗಳನ್ನೇ ನೆನಪಿಸುವಂತೆ ಮಾತನಾಡಿದ ಅವರು, ಬಹಳ ದೀರ್ಘ ಕಾಲ ವಾಷಿಂಗ್ಟನ್‌ ಡಿ.ಸಿಯ ಜನರು ಸರ್ಕಾರದ ಫಲವನ್ನು ಉಂಡಿದ್ದಾರೆ. ಉಳಿದ ಜನರು ಅದರ ವೆಚ್ಚವನ್ನು ಭರಿಸಿದ್ದಾರೆ. ವಾಷಿಂಗ್ಟನ್‌ ಸಮೃದ್ಧವಾಯಿತು. ಆದರೆ ಸಂಪತ್ತಿನಲ್ಲಿ ಇತರ ಜನರಿಗೆ ಪಾಲು ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜಕಾರಣಿಗಳು ಶ್ರೀಮಂತರಾದರು. ಆದರೆ ಉದ್ಯೋಗಗಳು ಹೊರ ದೇಶಗಳ ಪಾಲಾದವು. ಕಾರ್ಖಾನೆಗಳು ಮುಚ್ಚಿದವು. ಸಂಸ್ಥೆಗಳು ತಮ್ಮನ್ನು ರಕ್ಷಿಸಿಕೊಂಡವೇ ಹೊರತು ಜನರನ್ನು ರಕ್ಷಿಸಲಿಲ್ಲ. ಸಂಕಷ್ಟದಲ್ಲಿರುವ ದೇಶದ ಜನರಿಗೆ ಸಂಭ್ರಮಪಡಲು ಏನೇನೂ ಇಲ್ಲ ಎಂದು ಟ್ರಂಪ್‌ ಹೇಳಿದರು.

‘ಬೇರೆ ದೇಶಗಳ ಸೇನೆಗಳಿಗೆ ನೆರವು ನೀಡುತ್ತಿರುವ ನಾವು ನಮ್ಮ ಸೇನೆ ಬಲಗುಂದಲು ಅವಕಾಶ ನೀಡಿದ್ದೇವೆ. ಬೇರೆ ದೇಶಗಳ ಗಡಿಗಳನ್ನು ರಕ್ಷಿಸುವ ನಾವು ನಮ್ಮ ಗಡಿಗಳನ್ನು ರಕ್ಷಿಸಲು ನಿರಾಕರಿಸಿದ್ದೇವೆ. ವಿದೇಶಗಳಿಗಾಗಿ ಕೋಟ್ಯಂತರ ಡಾಲರ್‌ಗಳನ್ನು ವೆಚ್ಚ ಮಾಡಿದ್ದೇವೆ. ಆದರೆ ನಮ್ಮ ಮೂಲಸೌಕರ್ಯ ಕುಸಿದು ಹೋಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧವೂ ಗುಡುಗಿರುವ ಡೊನಾಲ್ಡ್ ಟ್ರಂಪ್, ತಮ್ಮ ನೇತೃತ್ವದ ಸರ್ಕಾರ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

loading...

No comments