Breaking News

ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡೆದ ಕಿತ್ತಾಟದ ಒಂದು ವರದಿ



ಕಲಬುರ್ಗಿಯಲ್ಲಿ ನಡೆದ  ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿಯೂ ಪಕ್ಷದೊಳಗಿನ ಕಿತ್ತಾಟ ಪ್ರತಿಧ್ವನಿಸಿತು. ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಹೆಸರಿನಲ್ಲಿ ಪರ್ಯಾಯ ಸಂಘಟನೆ ಕಟ್ಟುತ್ತಿರುವವರ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೆಲವರು ಕೂಗೆಬ್ಬಿಸಿದ್ದರಿಂದ ಸಭೆಯಲ್ಲಿ ಸ್ವಲ್ಪ ಹೊತ್ತು ಗದ್ದಲ ಉಂಟಾಯಿತು.

ಮಧ್ಯಾಹ್ನ ಊಟದ ವಿರಾಮದ ಬಳಿಕ ಕಾರ್ಯಕಾರಿಣಿ ಸೇರುತ್ತಿದ್ದಂತೆ ಅನೇಕರು ರಾಯಣ್ಣ ಬ್ರಿಗೇಡ್‌  ವಿಷಯ ಪ್ರಸ್ತಾಪಿಸಿ, ಗದ್ದಲವೆಬ್ಬಿಸಿದರು. ‘ನಮ್ಮ ಪಕ್ಷದ ಕೆಲವು ನಾಯಕರು ಪರ್ಯಾಯ ಸಂಘಟನೆ ಕಟ್ಟಲು ಮುಂದಾಗಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ’ ಎಂದು  ಕಳವಳ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಬೆಂಬಲಿಗರಾದ ಆಯನೂರು ಮಂಜುನಾಥ್‌, ರೇಣುಕಾಚಾರ್ಯ, ರಾಜುಗೌಡ, ವಿಶ್ವನಾಥ್‌, ಡಿ.ಎಸ್‌. ವೀರಯ್ಯ ಹಾಗೂ  ಅಪ್ಪಣ್ಣ ಮೊದಲಾದವರು  ಈಶ್ವರಪ್ಪನವರ ವಿರುದ್ಧ ಹರಿಹಾಯ್ದರು ಎಂದು ಮೂಲಗಳು  ತಿಳಿಸಿವೆ.

ಆ ಸಮಯದಲ್ಲಿ ಈಶ್ವರಪ್ಪನವರು ಸಭೆಯಲ್ಲಿ ಇರಲಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮತ್ತಿತರ ಪ್ರಮುಖ ನಾಯಕರು ಇನ್ನೂ ಬಂದಿರಲಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ಮೇಲೆ ಈಗಲೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ಅದು ಪಕ್ಷಕ್ಕೆ ದೊಡ್ಡ ಸಮಸ್ಯೆ ಆಗಬಹುದು ಎಂದು ಅವರು ಎಚ್ಚರಿಸಿದರು.

ರಾಜ್ಯ ಸರ್ಕಾರದ ವೈಫಲ್ಯ ಕುರಿತು  ಪ್ರಮುಖ ನಿರ್ಣಯ ಮಂಡಿಸಲು ಈಶ್ವರಪ್ಪ ಸಂಜೆ ಎದ್ದು ನಿಂತಾಗಲೂ, ಮುಂದಿನ ಸಾಲಿನಲ್ಲಿ ಕುಳಿತಿದ್ದ ಅನೇಕರು ಮಾತನಾಡಲು ಅಡ್ಡಿಪಡಿಸಿದರು.  ‘ನಮ್ಮ ಪ್ರಶ್ನೆಗಳಿಗೆ  ಉತ್ತರಿಸಿದ ಬಳಿಕ ಮಾತನಾಡಿ’ ಎಂದು  ಪಟ್ಟು ಹಿಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ನೀವು ಸೋತರೂ ವಿಧಾನ ಪರಿಷತ್ತಿಗೆ ನಿಮ್ಮನ್ನು ನಾಮಕರಣ ಮಾಡಲಾಗಿದೆ. ವಿಧಾನಪರಿಷತ್ತಿನ ನಾಯಕನ ಸ್ಥಾನ ಕೊಡಲಾಗಿದೆ. ಇಷ್ಟಾದ ಮೇಲೂ ನೀವು ಪಕ್ಷಕ್ಕೆ ದ್ರೋಹ ಮಾಡುತ್ತಿರುವುದು ಸರಿಯೇ. ನಮ್ಮ ಪ್ರಶ್ನೆಗೆ ಉತ್ತರ ಕೊಡದಿದ್ದರೆ ಮಾತನಾಡಲು ಅವಕಾಶ ಕೊಡುವುದಿಲ್ಲ’ ಎಂದು ಕೆಲವು ಉದ್ರಿಕ್ತ ಮುಖಂಡರು ಪಟ್ಟು ಹಿಡಿದರು. ಇದರಿಂದ ಈಶ್ವರಪ್ಪ ಕಕ್ಕಾಬಿಕ್ಕಿಯಾದರು.
-source prajavani


loading...

No comments