Breaking News

ಮಂಗಗಳ ತೊಂದರೆಯಿಂದ ಪಾರಾಗಲು ಕೃಷಿಕ ಮಾಡಿದ್ದೇನು


ಮಂಗಳೂರು : ಕೃಷಿ ಫಸಲಿಗೆ ದಾಳಿ ಇಡುವ ಮಂಗನ ಸೈನ್ಯದಿಂದ ಪಾರಾಗುವುದು ಗ್ರಾಮೀಣ ಭಾಗದ ರೈತರಿಗೆ ಕಷ್ಟದ ಕೆಲಸ. ಅದೇನೇ ಕಸರತ್ತು ಮಾಡಿ ಮಂಗಗಳ ಉಪಟಳ ನಿಲ್ಲಿಸಲು ಯತ್ನಿಸಿದರೂ ವಿಫಲ. ಇನ್ನೇನು ಫಸಲು ಕೈಗೆ ಬಂತು ಅನ್ನೋವಷ್ಟರಲ್ಲಿ ದಾಳಿ ಇಡುವ ಮಂಗಗಳು ಕ್ಷಣ ಮಾತ್ರದಲ್ಲಿ ಎಲ್ಲಾ ಫಸಲನ್ನೂ ನಾಶ ಮಾಡಿ ಹೋಗುವುದನ್ನು ಕಣ್ಣಾರೆ ಕಂಡಾಗ ಕೃಷಿಕನ ಹೊಟ್ಟೆಗೆ ಬೆಂಕಿಹಾಕಿದ ಅನುಭವ. ಇಂತಹ ವಾನರ ಸೈನ್ಯವನ್ನು ಮಟ್ಟ ಹಾಕಲು ಕೃಷಿಕರೊಬ್ಬರು ಉಪಾಯ ಹೂಡಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಹಳ್ಳಿ ಮನೆಯೊಂದರ ಕೃಷಿಕ ನಾರಾಯಣ ಭಟ್ ಕುಟುಂಬಕ್ಕೂ ವಾನರ ಕಾಟ ತಪ್ಪಿಲ್ಲ. ಇವರಿಗೆ ಪ್ರತಿ ನಿತ್ಯ ಮಂಗಗಳ ಕಾಟ. ಇವರ ತೋಟಕ್ಕೆ ದಾಂಗುಡಿ ಇಡುವ ಮಂಗಗಳ ಸೈನ್ಯ ತೋಟದಲ್ಲಿ ಬೆಳೆದ ಹಣ್ಣು ತರಕಾರಿಗಳನ್ನೇ ತಿಂದು ತೇಗುತ್ತಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಕಂಗಾಲಾದ ನಾರಾಯಣ್ ಭಟ್ ಮಂಗಗಳಿಗೆ ಸರಿಯಾದ ಪಾಠ ಕಲಿಸೋದಕ್ಕೆ ಬದಲಾಗಿ ಅವುಗಳ ಹೊಟ್ಟೆ ತುಂಬಿಸಲು ಹೊರಟರು. ತೋಟಕ್ಕೆ ಬರೋ ಮಂಗಗಳನ್ನು ಮನೆಯ ಮುಂದೆ ಕರೆದು ಊಟ ಹಾಕಿದರು. ಜೊತೆಗೆ ಹಣ್ಣು ಹಂಪಲುಗಳನ್ನೂ ನೀಡಿ ಅವುಗಳ ಹೊಟ್ಟೆ ತುಂಬಿಸಿದರು.

“ತೋಟವನ್ನೇ ನಾಶ ಮಾಡ್ತಿದ್ದ ವಾನರ ಸೈನ್ಯದ ಹೊಟ್ಟೆ ತುಂಬಿಸುತ್ತೇನೆ. ಮಂಗಗಳಿಗೆ ಅನ್ನ ಹಾಕಿ ಹೊಟ್ಟೆ ತುಂಬಿಸೋ ನನ್ನ ಐಡಿಯಾ ಫಲಿಸಿದೆ. ತೋಟಕ್ಕೆ ನುಗ್ಗಿ ಹಣ್ಣು ತರಕಾರಿಗಳನ್ನು ಕಿತ್ತು ತಿನ್ನುತ್ತಿದ್ದ ಮಂಗಗಳು ಇದೀಗ ಹಸಿದಾಗ ನನ್ನ ಮನೆ ಮುಂದೆ ಬರುತ್ತದೆ. ಆಗ ಅದಕ್ಕೆ ತಟ್ಟೆಯಲ್ಲಿ ಅನ್ನ ಹಾಕ್ತೀವಿ. ಇದೀಗ ತೋಟಕ್ಕೆ ನುಗ್ಗಿ ಯಾವ ಉಪದ್ರಾನೂ ಮಾಡುತ್ತಿಲ್ಲ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ ನಾರಾಯಣ ಭಟ್.

“ನಾವು ನೀಡೋ ಬಾಳೆ ಹಣ್ಣು ಹಾಗೂ ಅನ್ನವನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೆ. ಹೊಟ್ಟೆ ತುಂಬಿದ ಕೂಡಲೇ ಮತ್ತೆ ತೋಟಕ್ಕೆ ನುಗ್ಗಿ ಕೀಟಲೆ ಮಾಡದೆ ಸೀದಾ ಕಾಡಿಗೆ ಹೊರಟು ಹೋಗ್ತವೆ. ಇದ್ರಿಂದ ಬೆಳೆದ ತರಕಾರಿ ಹಣ್ಣು ಹಂಪಲುಗಳೂ ಸೇಫ್ ಆಗಿದೆ. ಮಂಗಗಳು ನಮ್ಮ ಸಾಕುಪ್ರಾಣಿಯಂತಾಗಿವೆ” ಅಂತಾರೆ ಭಟ್ ಅವರ ಪತ್ನಿ ಗೀತಾಲಕ್ಷ್ಮೀ.

ಮಂಗಗಳ ಉಪದ್ರದಿಂದ ಹೊರಬರಬೇಕು ಅನ್ನುವ ಐಡಿಯಾ ಅಂತೂ ಇಲ್ಲಿ ಫಲಿಸಿದೆ. ಹಾಗಂತ ಈ ಐಡಿಯಾ ಎಲ್ಲಾ ಕಡೆ ವರ್ಕೌಟ್ ಆಗಲ್ಲ. ಮಂಗನ ಮನಸ್ಸೂ ಮರ್ಕಟ, ಯಾವಾಗ ಏನು ಮಾಡುತ್ತೇ ಅಂತಾ ಹೇಳಕಾಗಲ್ಲ !



loading...

No comments