ಯಡ್ಡಿಯೂರಪ್ಪ ಕರೆದ ಸಂಧಾನ ಸಭೆಗೆ ಹಾಜರಾಗದ ಭಿನ್ನಮತೀಯರ ಬೇಡಿಕೆ ಏನು ?
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತವನ್ನು ಶಮನಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಹಾಗೂ ನಾಲ್ಕು ಮಂದಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಸಿ ಟಿ ರವಿ, ಅರವಿಂದ ಲಿಂಬಾವಳಿ ಹಾಗೂ ರವಿ ಕುಮಾರ್, ಪಕ್ಷದ ಕಚೇರಿಯಲ್ಲಿ ಸಭೆಯನ್ನು ಕರೆದಿದ್ದರು . ಯಡ್ಡಿಯೂರಪ್ಪ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ ಅವರಿಗೆ ಪತ್ರ ಬರೆದಿದ್ದಾರೆನ್ನಲಾದ 24 ಮಂದಿ ಪಕ್ಷ ನಾಯಕರಲ್ಲಿ 12 ಮಂದಿಗೆ ಗುರುವಾರದ ಸಭೆಗೆ ಆಹ್ವಾನ ನೀಡಲಾಗಿತ್ತಾದರೂ ಯಾರೂ ಅತ್ತ ತಲೆ ಹಾಕುವ ಗೋಜಿಗೇ ಹೋಗದೆ ಯಡ್ಡಿಯೂರಪ್ಪಗೆ ಮತ್ತೆ ಸವಾಲೆಸೆದಿದ್ದಾರೆ.
ಬದಲಾಗಿ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಪಕ್ಷದ ಕಚೇರಿಯಿಂದ ಅವರಿಂದ ಒಂದು ಪತ್ರ ಬಂದಿತ್ತು. ಸಭೆ ಕರೆದಿದ್ದ ಯಡ್ಡಿಗೇ ಸಡ್ಡು ಹೊಡೆದು ಸಭೆಯಲ್ಲಿ ಭಾಗವಹಿಸಬೇಕಾದಲ್ಲಿ ತಮ್ಮ ಷರತ್ತುಗಳಿಗೆ ಒಪ್ಪಬೇಕೆಂದು ಅಸಂತುಷ್ಟ ನಾಯಕರು ಬೇಡಿಕೆಯಿಟ್ಟಿದ್ದರು.
“ಸೊಗಡು ಶಿವಣ್ಣ ಹಾಗೂ ಎಂ ಬಿ ನಂದೀಶ್ ಅವರಿಗೆ ನೀಡಲಾದ ಶೋಕಾಸ್ ನೊಟೀಸನ್ನು ಹಿಂದಕ್ಕೆ ಪಡೆಯಬೇಕು, ಪತ್ರಕ್ಕೆ ಸಹಿ ಹಾಕಿದ 24 ಮಂದಿಯಲ್ಲಿ ಕೇವಲ 12 ಮಂದಿಯನ್ನು ಮಾತ್ರ ಆಹ್ವಾನಿಸಿದ್ದೇಕೆ ಎಂಬ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಬೇಕು” ಎಂದು ಅವರು ಬೇಡಿಕೆಯಿರಿಸಿದ್ದಾರೆ. ಈ ಹಿಂದೆ ತಾವು ಸಭೆಗೆ ಹಾಜರಾಗುವುದಾಗಿ ಹೇಳಿದ್ದ ಅಸಂತುಷ್ಟ ನಾಯಕರೂ ಭಿನ್ನಮತೀಯ ನಾಯಕ ಈಶ್ವರಪ್ಪ ಬೆಂಬಲಿಗರೂ ಎಂ ಬಿ ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ರಘುನಾಥ್ ರಾವ್ ಮಲ್ಕಾಫುರೆ ಹಾಗೂ ಸೋಮಣ್ಣ ಬೇವಿನಮರದ್ ಗುರುವಾರ ತಮ್ಮ ನಿರ್ಧಾರ ಬದಲಾಯಿಸಿದ್ದು ಸ್ಪಷ್ಟವಾಗಿತ್ತು.
ಸಭೆ ನಡೆಯದೇ ಇರುವ ಬಗ್ಗೆ ಯಡ್ಡಿಯೂಪ್ಪ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ, ಅರವಿಂದ ಲಿಂಬಾವಳಿ ಪತ್ರಕರ್ತರೊಂದಿಗೆ ಮಾತನಾಡಿ, ಪಕ್ಷದ ಕೇಂದ್ರ ನಾಯಕತ್ವ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಪಕ್ಷಕ್ಕೆ ಸಡ್ಡು ಹೊಡೆದವರ ವಿರುದ್ಧ ಕ್ರಮ ಕೈಗೊಳ್ಳುವ ದಿನ ದೂರವಿಲ್ಲ ಎಂದಿದ್ದಾರೆ.
-karavali ale
loading...
No comments