Breaking News

ಸಿಪಿಎಂಗೆ ಸಡ್ಡು ಬಡಿಯಲು ಫೆ.25 ಕ್ಕೆ ಮಂಗಳೂರು ಬಂದ್ ಕರೆ ನೀಡಿದ :ಹಿಂದೂ ಪರ ಸಂಘಟನೆಗಳು


ಕೇರಳ ಮುಖ್ಯಮಂತ್ರಿ ಭೇಟಿ ಹಿನ್ನಲೆ

ಮಂಗಳೂರು ; ಫೆ.೨೫ರಂದು ಮಂಗಳೂರಿನಲ್ಲಿ ಆಯೋಜಿಸಿರುವ ಐಕ್ಯತಾ ಮೆರವಣಿಗೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳು ವಿರೋಧಿಸಿ ಅದೇ ದಿನ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿವೆ. ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರ ಸರಣಿ ಹತ್ಯೆ ಪ್ರಕರಣ, ಚಿತ್ರನಟಿಯ ಮೇಲೆಯೇ ಲೈಂಗಿಕ ಕಿರುಕುಳದಂಥ ಗಂಭೀರ ಪ್ರಕರಣಗಳು ಜರುಗಿದ್ದರೂ ಅಲ್ಲಿನ ಮುಖ್ಯಮಂತ್ರಿ ಇಲ್ಲಿ ಬಂದು ಐಕ್ಯತಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಔಚಿತ್ಯವಾದರೂ ಏನು ಎಂದು ಹಿಂದೂ ಸಂಘಟನೆಗಳು ಪ್ರಶ್ನಿಸಿವೆ. ಬಂದ್ ಕರೆಯ ಬಗ್ಗೆ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಈ ಕುರಿತು ಮಾಹಿತಿ ನೀಡಿದರು.

ಸಾಮರಸ್ಯದ ಕರಾವಳಿಯಲ್ಲಿ ದಿನೇ ದಿನೇ ಕೋಮು ಶಕ್ತಿಗಳ ಅಟ್ಟಹಾಸ ಮಿತಿಮೀರುತ್ತಿದೆ. ಇದರಿಂದ ಕರಾವಳಿಯಲ್ಲಿ ಅಶಾಂತಿ ನೆಲೆಸಿದೆ ಎಂದು ಆರೋಪಿಸಿ ಸಿಪಿಎಂ ನಗರದಲ್ಲಿ ಐಕ್ಯತಾ ಮೆರವಣಿಗೆ ಆಯೋಜಿಸಿದೆ. ಅದರಂತೆ ಫೆ.೨೫ ರಂದು ಮಧ್ಯಾಹ್ನ ಬೃಹತ್ ಮೆರವಣಿಗೆಯ ಜತೆ ನೆಹರೂ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಆದರೆ ಪಿಣರಾಯಿ ಆಡಳಿತದಲ್ಲಿರೋ ಕೇರಳದಲ್ಲಿ ಹತ್ತಾರು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಿದ್ದು, ಈ ಘಟನೆಗಳಿಗೆ ಕೇರಳ ಸಿಎಂ ನೇರ ಕಾರಣರಾಗಿದ್ದಾರೆ. ಅವರು ಪ್ರತಿನಿಧಿಸುತ್ತಿರುವ ಕೇರಳದ ಕಣ್ಣೂರು ಜಿಲ್ಲೆಯ ಧರ್ಮಾಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ರಕ್ಷಣೆ ಇಲ್ಲವಾಗಿದೆ. ಅಮಾಯಕರ ಕೊಲೆ, ಆರೆಸ್ಸೆಸ್, ಬಿಜೆಪಿ, ಕಾಂಗ್ರೆಸ್, ಮುಸ್ಲಿಂ ಲೀಗ್ ಮಾತ್ರವಲ್ಲದೆ ಸ್ವತ: ಮಿತ್ರಪಕ್ಷ ಸಿಪಿಐ ಕಾರ್ಯಕರ್ತರ ಮೇಲೂ ಆಕ್ರಮಣ ನಡೆಯುತ್ತಲೇ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರು ಮಂಗಳೂರಿಗೆ ಬರಬಾರದು ಎಂದು ವಿಎಚ್‌ಪಿ, ಬಜರಂಗದಳ ಮತ್ತು ಹಿಂಜಾವೇ ಆಗ್ರಹಿಸಿದೆ. ಅಲ್ಲದೆ ಅವರ ಆಗಮನವನ್ನು ವಿರೋಧಿಸಿ ಫೆ.೨೫ರಂದು ಸ್ವಯಂ ಪ್ರೇರಿತ ಮಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.

ಬಂದ್ ಪ್ರಯುಕ್ತ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವ ಮೂಲಕ, ಶಾಲಾ ಕಾಲೇಜ್ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಹಾಗೂ ಖಾಸಗಿ ಬಸ್ ಚಾಲಕ, ಮಾಲಕ ಮತ್ತು ಸಿಬ್ಬಂದಿ ಬಂದ್ ಬೆಂಬಲಿಸಬೇಕೆಂದು ಸಂಘಟನೆಗಳು ಮನವಿ ಮಾಡಿವೆ. ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಹಿಂಜಾವೇ ಜಿಲ್ಲ ಸಂಚಾಲಕ ಅಮಿತ್ ಕುಮಾರ್, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.

loading...

No comments