Breaking News

ಸೌಜನ್ಯಾ ಪ್ರಕರಣ ತನಿಖೆ ಸುಪ್ರೀಂ ಉಸ್ತುವಾರಿಯಲ್ಲಿ ನಡೆಯಲಿ : ತಿಮರೋಡಿ

ಮಂಗಳೂರು : ಬೆಳ್ತಂಗಡಿ ತಾಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ಮರು ತನಿಖೆಗೆ ಒಳಪಡಿಸುವಂತೆ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ತಿಮರೋಡಿ ಒತ್ತಾಯಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತ  ಈ ಒತ್ತಾಯ ಮಾಡಿದ ಅವರು, “ಮೊನ್ನೆ ಪ್ರಕರಣದ ಶಂಕಿತ ಆರೋಪಿಗಳೆನ್ನಲಾದ ಮಲ್ಲಿಕ್ ಜೈನ್, ಧೀರಜ್ ಮತ್ತು ಉದಯ್ ಅವರು ಹೇಳಿದ್ದು ಎಲ್ಲವೂ ಶುದ್ಧ ಸುಳ್ಳು. ಈ ಮೂವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿಲ್ಲ. ಪರೀಕ್ಷೆಗೆ ಒಳಪಡಿಸಿದ್ದರೂ ಎಲ್ಲಿ ಎನ್ನುವುದನ್ನು ಮೊದಲು ತಿಳಿಸಲಿ. ದಾಖಲೆ ಪತ್ರಗಳನ್ನು ಹಾಜರುಪಡಿಸಲಿ. ಇನ್ನು ಉಳಿದ ಆರೋಪಿಗಳನ್ನೂ ಸಿಬಿಐ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಈ ಪ್ರಕರಣದ ತನಿಖೆಯನ್ನು ನಡೆಸುವುದಕ್ಕೆ ಸಿಬಿಐ ಅಗತ್ಯವೇ ಇಲ್ಲ. ಓರ್ವ ಸಾಮಾನ್ಯ ಪೇದೆಗೆ ಕೊಟ್ಟರೂ ಈ ಕೊಲೆ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಹೇಳಬಲ್ಲ. ಆದರೆ ಇಷ್ಟೊಂದು ವಿಚಾರಣೆ ಮಾಡಿದ ಸಿಬಿಐ ಯಾರೋ ಅಮಾಯಕನನ್ನು ತೋರಿಸಿ ಈತನೇ ಕೊಲೆಗಾರ ಎಂದಿರುವುದರ ಹಿಂದೆ ಯಾರ ಕೈವಾಡ ಇದೆ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಪ್ರಕರಣದ ಹಿಂದೆ  ಪ್ರಭಾವಿ ನಾಯಕರ ಪಾತ್ರವಿದ್ದು, ಅದು ಬಯಲಿಗೆ ಬರಬೇಕು.

ಈ ಪ್ರಕರಣ ಸುಪ್ರೀಂ ಕೋರ್ಟ್ ಸುಪರ್ದಿಯಲ್ಲೇ ನಡೆಯಬೇಕು” ಎಂದು ಆಗ್ರಹಿಸಿದರು.

“ನಾವು ನಂಬಿದ ಅಣ್ಣಪ್ಪ ಮತ್ತು ಮಂಜುನಾಥ ದೇವರು ಎಂದಿಗೂ ನಮ್ಮ ಕೈಬಿಡಲ್ಲ. ಈ ಕಾರಣಕ್ಕೇ ಮತ್ತೆ ಸಿಬಿಐ ವಿಶೇಷ ನ್ಯಾಯಾಲಯ ಮರು ತನಿಖೆಯನ್ನು ನಡೆಸಲು ಸೂಚಿಸಿದೆ. ಬೆಳ್ತಂಗಡಿಯಲ್ಲಿ ಇದುವರೆಗೆ ಕಂಡು ಕೇಳರಿಯದ ದೊಡ್ಡ ಮಟ್ಟದ ಪ್ರತಿಭಟನೆ ಸೌಜನ್ಯಾ ನ್ಯಾಯಕ್ಕಾಗಿ ಆಗ್ರಹಿಸಿ ನಡೆದಿದೆ. ಇಷ್ಟೊಂದು ಜನ ಸೇರಿ ನ್ಯಾಯಕ್ಕಾಗಿ ಮೊರೆ ಇಟ್ಟಿರುವುದು ಮಂಜುನಾಥನಿಗೆ ಮುಟ್ಟಿರಬೇಕು. ಆ ಮಗುವಿನ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಕ್ಕೂ ಸಿದ್ಧರಿದ್ದೇವೆ. ನಾವು ಇದನ್ನು ಇಲ್ಲಿಗೇ ಬಿಟ್ಟುಬಿಡುತ್ತೇವೆ ಅಂತ ಯಾರೂ ತಿಳಿಯವುದು ಬೇಡ. ಸುಪ್ರೀಂ ಕೋರ್ಟ್ ಕದವನ್ನು ನಾವು ತೆರೆದಿಟ್ಟಿದ್ದೇವೆ” ಎಂದು ತಿಮರೋಡಿ ಹೇಳಿದರು.

ಸೌಜನ್ಯ ತಾಯಿ ಕುಸುಮಾವತಿ, ವಿಠಲ ಗೌಡ, ಮನೋಜ್ ಉಪಸ್ಥಿತರಿದ್ದರು.
Via karavali-ale

loading...

No comments