Breaking News

ಸಿಎಂ ಸಿದ್ದು ವಿರುದ್ಧ ಪ್ರಕರಣ ಹೊಸ ಲೋಕಾಯುಕ್ತ ಮುಂದೆ

ಬೆಂಗಳೂರು : ಕರ್ನಾಟಕದ ಲೋಕಾಯುಕ್ತರಾಗಿ ಜಸ್ಟಿಸ್ ವಿಶ್ವನಾಥ ಶೆಟ್ಟಿ ಅಧಿಕಾರ ವಹಿಸಿಕೊಂಡ ಎರಡೇ ದಿನಗಳಲ್ಲಿ ಅವರನ್ನು ಆ ಹುದ್ದೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವೊಂದು ಲೋಕಾಯುಕ್ತದ ಮುಂದೆ ಬಂದಿದೆ.

ಉದ್ಯಮಿ ವಿವೇಕಾನಂದ  ಎಂಬವರನ್ನು ಬೆಂಗಳೂರು ಟರ್ಫ್ ಕ್ಲಬ್ಬಿಗೆ  ನೇಮಿಸಿ  ನಂತರ ಅವರಿಂದ ಸಿದ್ದರಾಮಯ್ಯ  ರೂ 1.3 ಕೋಟಿ ಸಾಲ ಪಡೆದಿದ್ದಾರೆಂದು  ಆರೋಪಿಸಿ  ರಾಮಮೂರ್ತಿ ಗೌಡ ಎಂಬವರು ದೂರು ದಾಖಲಿಸಿದ್ದಾರೆ.

ಇದೇ ದೂರನ್ನು ಸಾಮಾಜಿಕ ಕಾರ್ಯಕರ್ತ ಎಸ್ ಭಾಸ್ಕರನ್ ಕಳೆದ ವರ್ಷದ ಮೇ ತಿಂಗಳಲ್ಲಿ (ರಾಜ್ಯದಲ್ಲಿ ಲೋಕಾಯುಕ್ತರಿಲ್ಲದ ವೇಳೆ) ರಾಜ್ಯಪಾಲರಿಗೆ  ಸಲ್ಲಿಸಿ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೋರಿದ್ದರೂ ರಾಜ್ಯಪಾಲರು ನಿರಾಕರಿಸಿದ್ದರು. ಆಗ ಈ ಆರೋಪವನ್ನು ಮುಖ್ಯಮಂತ್ರಿ ಹಾಗೂ ವಿವೇಕಾನಂದ ಇಬ್ಬರೂ ಅಲ್ಲಗಳೆದಿದ್ದರು.

ಇದೀಗ ನೂತನ ಲೋಕಾಯುಕ್ತರ ನೇಮಕವಾಗಿರುವುದರಿಂದ ರಾಮಮೂರ್ತಿ ಗೌಡ ಎಂಬವರು ಅದೇ ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ಘೋಷಣಾ ಪತ್ರದ ಪ್ರತಿಯನ್ನೂ ದೂರಿನೊಂದಿಗೆ ಲಗತ್ತಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಜಸ್ಟಿಸ್ ಶೆಟ್ಟಿ ಅಡಿಶನಲ್ ರಿಜಿಸ್ಟ್ರಾರ್ ಆಫ್ ಎಂಕ್ವೈರೀಸ್-2 ಅವರಿಗೆ ಹಸ್ತಾಂತರಿಸಿದ್ದರೂ ಪ್ರಕರಣದಲ್ಲಿ ಅಂತಿಮ ತೀರ್ಮಾನವನ್ನು ಲೋಕಾಯುಕ್ತರೇ ಕೈಗೊಳ್ಳಬೇಕು.

ಏನಿದು ಪ್ರಕರಣ ?

ರಾಜ್ಯ ಸರಕಾರವು ಬೆಂಗಳೂರು ಟರ್ಫ್ ಕ್ಲಬ್ಬಿಗೆ ಮೂವರನ್ನು ನಾಮಕರಣಗೊಳಿಸುವ ಅಧಿಕಾರ ಹೊಂದಿದ್ದು ಅವರಲ್ಲಿ ಪೊಲೀಸ್ ಆಯುಕ್ತ ಹಾಗೂ ವಿತ್ತ ಕಾರ್ಯದರ್ಶಿ ಇಬ್ಬರಾಗಿದ್ದರೆ, ಮೂರನೇ ಆಯ್ಕೆ ಸರಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ. ಸಿದ್ದರಾಮಯ್ಯ ಅವರು  ಎಲ್ ವಿವೇಕಾನಂದ ಅವರನ್ನು ಆರಿಸಿದ್ದರೆ ಜುಲೈ 2014ರ್ಲಿ ಅವರಿಂದಲೇ ರೂ 1.3 ಕೋಟಿ ಸಾಲ ಪಡೆದಾಗ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು..

ಮುಖ್ಯಮಂತ್ರಿಯ ಕ್ರಮ ಕೇಂದ್ರ ಸರಕಾರವು ಜನಪ್ರತಿನಿಧಿಗಳಿಗೆ  ರೂಪಿಸಿದ ನೀತಿ ಸಂಹಿತೆಗೆ ವಿರುದ್ಧವಾಗಿದೆ, ಈ ವಿಚಾರವಾಗಿ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಗಳಿಗೂ ಮಾಹಿತಿ ನಿರಾಕರಿಸಲಾಗಿದೆ ಎಂದು ಗೌಡ ದೂರಿದ್ದಾರೆ. “ಲಾಭ ತರುವ ಹುದ್ದೆಯೊಂದಕ್ಕೆ ವ್ಯಕ್ತಿಯೊಬ್ಬರನ್ನು ನೇಮಿಸಿ ನಂತರ ಅದೇ ವ್ಯಕ್ತಿಯಿಂದ ಮುಖ್ಯಮಂತ್ರಿಯೊಬ್ಬರು ಸಾಲ ಪಡೆದಿರುವುದು ದುರದೃಷ್ಟಕರ” ಎಂದು ಅವರು ಹೇಳಿದ್ದಾರೆ.

ಆದರೆ ಆರೋಪಗಳನ್ನು ನಿರಾಕರಿಸಿರುವ ಎಲ್ ವಿವೇಕಾನಂದ “ಬಿಟಿಸಿ ಸದಸ್ಯತ್ವ ಯಾವುದೇ ಲಾಭದ ಹುದ್ದೆಯಲ್ಲ. ನಮಗೆ ಯಾವುದೇ ವೇತನ ಸಿಗುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ

-karavli ale 

loading...

No comments