Breaking News

ಶಶಿಕಲಾ ವಿರುದ್ಧ ಪನ್ನೀರ್‌ಸೆಲ್ವಂ ರಣ ಕಹಳೆ


ನಾಟಕೀಯ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದ ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್‌ ವಿರುದ್ಧ ಉಸ್ತುವಾರಿ ಸಿಎಂ ಪನ್ನೀರ್‌ ಸೆಲ್ವಂ ಬಂಡಾಯದ ಬಾವುಟ ಹಾರಿಸಿದ್ದಾರೆ.

''ಬಲವಂತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನಿಂದ ರಾಜೀನಾಮೆ ಕೊಡಿಸಲಾಯಿತು. ತಮಿಳುನಾಡು ಜನರು ಸಮ್ಮತಿಸಿದರೆ, ನನ್ನ ರಾಜೀನಾಮೆಯನ್ನು ವಾಪಸ್‌ ಪಡೆಯುತ್ತೇನೆ,'' ಎಂದು ಪನ್ನೀರ್‌ಸೆಲ್ವಂ ಮಂಗಳವಾರ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬಲವಂತವಾಗಿ ರಾಜೀನಾಮೆ: ''ನನ್ನ ಗಮನಕ್ಕೆ ತರದೆಯೇ ದಿಢೀರನೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಯಿತು. ಸಭೆಗೆ ಬರುವಂತೆ ನನಗೆ ಕೆಲವು ಶಾಸಕರು ತಿಳಿಸಿದರು. ಆ ಪ್ರಕಾರ ಸಭೆಗೆ ಹಾಜರಾದಾಗ ಮುಖ್ಯಮಂತ್ರಿ ಬದಲಾವಣೆಯ ಪ್ರಸ್ತಾಪ ಮಾಡಿದರು. ಶಶಿಕಲಾ ಅವರಿಗೆ ಸ್ಥಾನ ಬಿಟ್ಟುಕೊಡುವಂತೆ ಸಭೆಯಲ್ಲಿ ಆಗ್ರಹಿಸಿದರು. ಆದರೆ ಅದಕ್ಕೆ ನಾನು ಸಮ್ಮತಿಸಲಿಲ್ಲ. 'ಈ ಅವಮಾನ ಯಾಕೆ ಮಾಡುತ್ತಿದ್ದೀರಿ... ನಾನು ಅಧಿಕಾರ ತ್ಯಜಿಸಲಾರೆ' ಎಂದು ಹೇಳಿದೆ. ಆದರೂ ಬಲವಂತದಿಂದಲೇ ನನ್ನಿಂದ ರಾಜೀನಾಮೆ ಕೊಡಿಸಲಾಯಿತು,'' ಎಂದು ಸೆಲ್ವಂ ಹೇಳಿದ್ದಾರೆ.

''ಒಳಗೆ ಬೆಟ್ಟದಷ್ಟು ನೋವು, ಅವಮಾನ ಇಟ್ಟುಕೊಂಡು ಮೂರು ದಿನ ಸಹಿಸಿದೆ. ನನ್ನಿಂದ ಅನ್ಯರಿಗೆ ಅಥವಾ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ಬೇಡ ಎನ್ನುವ ಕಾರಣಕ್ಕೆ ತಡೆದುಕೊಂಡಿದ್ದೆ. ಆದರೆ ಸತ್ಯ ಮುಚ್ಚಿಡುವುದನ್ನು 'ಅಮ್ಮ'ನ ಆತ್ಮ ಒಪ್ಪಲಾರದು ಎನಿಸಿದ್ದರಿಂದ ಈಗ ಇದನ್ನೆಲ್ಲ ಬಹಿರಂಗ ಪಡಿಸುತ್ತಿದ್ದೇನೆ,'' ಎಂದಿದ್ದಾರೆ.

''ಶಶಿಕಲಾ ಅವರು ಮುಖ್ಯಮಂತ್ರಿಯಾಗಬೇಕೆಂದು ಆಗ್ರಹಿಸಿ ಸಚಿವರಾದ ಆರ್‌.ಬಿ.ಉದಯಕುಮಾರ್‌, ಸೆಲ್ಲುರ್‌ ರಾಜು ಮತ್ತು ತಂಬಿದೊರೈ ಅವರು ನನ್ನ ವಿರುದ್ಧ ದನಿ ಎತ್ತಿದರು. ಆಗ ನಾನು ತೀವ್ರ ಅವಮಾನ ಅನುಭವಿಸಿದೆ,'' ಎಂದು ಪನ್ನೀರ್‌ ಸೆಲ್ವಂ ನೋವು ತೋಡಿಕೊಂಡಿದ್ದಾರೆ.

ಕಳೆದ ಭಾನುವಾರ ನಡೆದ ಎಐಎಡಿಎಂಕೆ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ತರುವಾಯ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಮ್ಮಾ ಸಮಾಧಿ ಬಳಿ ಧ್ಯಾನ

ಮಂಗಳವಾರ ರಾತ್ರಿ 9ಗಂಟೆ ಸುಮಾರಿಗೆ ದಿಢೀರನೆ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿದ ಸೆಲ್ವಂ, 40 ನಿಮಿಷಗಳ ಕಾಲ ಧ್ಯಾನ ಮಾಡಿದರು. ಬಳಿಕ ಸಿಎಂ ಆಗಿ ಮುಂದುವರೆಯುವ ಇಂಗಿತ ವ್ಯಕ್ತ ಪಡಿಸಿದರು. ಸಮಾಧಿಗೆ ಭೇಟಿ ನೀಡಲು ಹೊರಾಟಾಗಲೂ ತಮ್ಮನ್ನು ತಡೆಯುವ ಪ್ರಯತ್ನಗಳು ನಡೆದವೆಂದು ಸೆಲ್ವಂ ಆರೋಪಿಸಿದ್ದಾರೆ.
-vk
loading...

No comments