ಟ್ರಂಪ್ ಮೊಬೈಲ್ ಬೆಲೆ ಎಷ್ಟು ಗೊತ್ತಾ?
ಒಂದು ದುಬಾರಿ ಮೊಬೈಲ್ ಬೆಲೆ ಅಬ್ಬಬ್ಬಾ ಎಂದರೆ, ಐವತ್ತು ಸಾವಿರ ರೂ. ಇಲ್ಲ, ಒಂದು ಲಕ್ಷ ರೂ. ಬೆಲೆ ಇರಬಹುದು. ಅಷ್ಟಕ್ಕೆ ಈ ಮೊಬೈಲ್‌ಗೆ ಇಷ್ಟೊಂದು ರೇಟಾ ಎಂದು ಕೈ ಕೈ ಹಿಸುಕಿಕೊಳ್ಳಬಹುದು.
ಆದರೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊಬೈಲ್ ಬೆಲೆ ಕೇಳಿದರೆ ಮಾರುದ್ದ ಹಾರೋದು ಗ್ಯಾರಂಟಿ.
ಮೊಬೈಲ್ ಬೆಲೆ ಎಷ್ಟಿರಬಹುದು, ಐದು ಲಕ್ಷವೇ, ಇಲ್ಲ ಐವತ್ತು ಲಕ್ಷವೇ ಉಹುಂ. ನಿಜ ಹೇಳಬೇಕೆಂದರೆ, ಬರೋಬ್ಬರಿ 1.51 ಲಕ್ಷ ಅಮೆರಿಕನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 1 ಕೋಟಿ 2 ಲಕ್ಷ ರೂ.
ಈ ಮೊಬೈಲ್ ಬಗ್ಗೆ ಡೊನಾಲ್ಡ್ ಟ್ರಂಪ್ ಬಾರಿ ಖುಷಿಯಾಗಿದ್ದಾರಂತೆ. ಆದರೆ ಈ ಮೊಬೈಲ್ ಅನ್ನು ಟ್ರಂಪ್ ಸಾಹೇಬರಂತೂ ಖರೀದಿಸಿದ್ದಲ್ಲ. ಅವರ ಅಭಿಮಾನಿಗಳು ಅವರಿಗೆ ಕೊಟ್ಟ ಉಡುಗೊರೆಯಂತೆ!.
ಐಷಾರಾಮಿ ಜೀವನ ನಡೆಸುವ ಟ್ರಂಪ್‌ರವರ ಸಂಗ್ರಹಕ್ಕೆ ಈ ದುಬಾರಿ ಮೊಬೈಲ್ ಸೇರ್ಪಡೆಯಾಗಿದೆ.
ಅಮೆರಿಕದ ಅಧ್ಯಕ್ಷರಾದ ಕೂಡಲೇ ಅವರ ಅಭಿಮಾನಿಗಳು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊಬೈಲ್ ಅನ್ನು ಟ್ರಂಪ್‌ಗೆ ಉಡುಗೊರೆಯಾಗಿ ನೀಡಿ ಕೃತಾರ್ಥರಾಗಿದ್ದಾರೆ.
ಕೋಟಿ ರೂ. ಬೆಲೆ ಬಾಳುವ ಈ ಮೊಬೈಲ್‌ನಲ್ಲಿ ಅಂಥ ವಿಶೇಷ ಏನಿದೆ ಅಂತಿರಾ. ಅಂತಿಂಥ ಮೊಬೈಲ್ ಅಂತೂ ಅಲ್ಲ. ಟ್ರಂಪ್ ಸಾಹೇಬರಿಗೆ ಅಂತ ರೂಪಿಸಿರೋ ಈ ಮೊಬೈಲ್ ಅನ್ನು ಅಪ್ಪಟ ಅಪರಂಜಿ ಚಿನ್ನದಲ್ಲಿ ಮಾಡಿದ್ದಾಗಿದೆ.
ಸ್ಮಾರ್ಟ್ ಕೇಸ್ ಮೇಲೆ ವಜ್ರದ ಹರಳುಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಸ್ಮಾರ್ಟ್ ಕೇಸ್ ಮೇಲೆ ಟ್ರಂಪ್ ಅವರ ಫೋಟೊ ಹಾಗೂ ಹೆಸರನ್ನು ಮುದ್ರಿಸಲಾಗಿದೆ.
ಬಂಗಾರದಿಂದ ರೂಪಿಸಿದ ಸ್ಮಾರ್ಟ್ ಫೋನ್ ಬೇಕೆಂದು ಚೀನಾದ ಮಹಿಳೆಯೊಬ್ಬರು ಗೋಲ್ಡ್ ಜೆನಿ ಕಂಪನಿಯನ್ನು ಸಂಪರ್ಕಿಸಿದರಂತೆ. ವಿಶೇಷ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್‌ಗಾಗಿಯೇ ವಜ್ರದ ಹರಳುಗಳನ್ನು ಲೇಪಿಸಿ ಮೊಬೈಲ್ ತಯಾರಿಸಿದೆ.
ಅದೇನೆ ಇರಲಿ, ಟ್ರಂಪ್ ಬಳಿ ಇರುವ ಮೊಬೈಲ್‌ನಲ್ಲಿ ಚಿನ್ನ, ವಜ್ರದ ಹರಳು ತೆಗೆದುಬಿಟ್ಟರೆ ಇದು ಸಾಮಾನ್ಯ ಮೊಬೈಲ್ ಆಗಲಿದೆ.
ಕೋಟಿ ಬೆಲೆ ಬಾಳುವ ಮೊಬೈಲ್ ಅನ್ನು ಟ್ರಂಪ್ ಬಳಸಲಾರಂಭಿಸಿದ್ದಾರೆ. ಆದರೆ ಅವರ ಅಂಗರಕ್ಷಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಅಪ್ಪಿತಪ್ಪಿ ಕೋಟಿ ಬೆಲೆ ಬಾಳುವ ಮೊಬೈಲ್ ಕಣ್ಮರೆಯಾದರೆ, ಇಲ್ಲ ಕಳುವಾದರೆ, ಅಯ್ಯೋ ಊಹಿಸಲೂ ಸಾಧ್ಯವಿಲ್ಲದಂತಾಗಿದೆ ಅಂಗರಕ್ಷಕರ ಪಾಡು.
ಅದೇನೇ ಇರಲಿ, ಅಮೆರಿಕದ ಅಧ್ಯಕ್ಷರಿಗೆ ಚಿನ್ನದಲ್ಲಿ ಮೊಬೈಲ್ ಮಾಡಿಕೊಟ್ಟ ಗೋಲ್ಡ್ ಜೆನಿ ಕಂಪನಿಗಂತೂ ಬಾರಿ ಲಕ್ಕು ಕುದುರಿದೆ.
ಟ್ರಂಪ್ ಗೆದ್ದ ಬಳಿಕ ಈವರೆಗೆ ಇಂಥದ್ದೇ ಮೊಬೈಲ್‌ಗಾಗಿ 9 ಆರ್ಡರ್‌ಗಳು ಬಂದಿವೆ.
loading...
No comments