Breaking News

ಕಾಣೆಯಾದ ಯುವಕ ಮಂಗಳಮುಖಿಯಾದನೇ ?


ಕೊಪ್ಪಳ: ಡಿಪ್ಲೊಮಾ ನಂತರ ಖಾಸಗಿ ಸೋಲಾರ್‌ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷದ ಯುವಕನೊಬ್ಬ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದಾನೆ. ಆತ ಮಂಗಳಮುಖಿಯಾಗಿದ್ದಾನೆ ಎಂದು ಕುಟುಂಬದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಯಲಬುರ್ಗಾ ತಾಲೂಕಿನ ಗದ್ದಿಗೇರಿ ತಾಂಡಾದ ಯುವಕನೊಬ್ಬ ಮಂಗಳಮುಖಿಯನ್ನು ಮದುವೆಯಾದ ಘಟನೆ ಇನ್ನೂ ಹಸಿರಿರುವಾಗಲೇ ಈ ಯುವಕನ ದಿಢೀರ್‌ ನಾಪತ್ತೆ ಹಲವು ಅನುಮಾನಗಳಿಗೆ ನಾಂದಿಯಾಗಿದೆ. ಇದೇ ತಾಲೂಕಿನ ಹುಣಸಿಹಾಳತಾಂಡಾದ ಬಡ ಕುಟುಂಬದ ಈ ಯುವಕ, ಕಷ್ಟನಷ್ಟಗಳ ಮಧ್ಯೆ ಡಿಪ್ಲೊಮಾ ಪೂರೈಸಿದ್ದ. ಪದವಿ ಪೂರೈಸುತ್ತಿದ್ದಂತೆ ಕೊಪ್ಪಳದ ಖಾಸಗಿ ಕಂಪನಿಯೊಂದರಲ್ಲಿ ಕೆಲಸವೂ ದೊರಕಿತ್ತು. ಕೈತುಂಬ ಸಂಬಳ ತರುವುದನ್ನು ಕಂಡ ಕುಟುಂಬದವರು, ಮಗನಿಂದ ತಮ್ಮೆಲ್ಲ ಸಮಸ್ಯೆಗಳು ಪರಿಹಾರವಾದವು ಎಂದೇ ಸಂತಸಗೊಂಡರು. ಆದರೆ, ಈ ಸಂತಸ ಬಹಳ ವರ್ಷ ಉಳಿಯಲಿಲ್ಲ.
ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬ: ಕಳೆದ ಎರಡು ವರ್ಷಗಳ ಹಿಂದೆ ಈ ಯುವಕ ಯಾರಿಗೂ ಹೇಳದೇ ಕೇಳದೇ ಊರು ತೊರೆದಿದ್ದಾನೆ. ಆತನ ಆದಾಯ ನಂಬಿ ಬದುಕುತ್ತಿದ್ದ ಕುಟುಂಬ, ಕಣ್ಣೀರಿನಲ್ಲೇ ಕೈತೊಳೆಯುತ್ತಿದೆ. ಮಂಗಳಮುಖಿಯರ ಮೋಹಕ್ಕೆ ತುತ್ತಾದ ಈ ಯುವಕ ತಾನೂ ಮಂಗಳಮುಖಿಯಾಗಿ ಪರಿವರ್ತನೆಯಾಗಿರುವ ಬಗ್ಗೆ ಕೆಲವು ಘಟನೆಗಳು ಪುಷ್ಠಿನೀಡಿವೆ. ಹುಣಸಿಹಾಳತಾಂಡಾಕ್ಕೆ ಗುರುವಾರ ಭೇಟಿನೀಡಿದಾಗ ಯುವಕನ ನಾಪತ್ತೆ ಪ್ರಕರಣ, ಹಲವು ಶಂಕೆಗಳನ್ನು ಹೊರಹಾಕಿದೆ.
ಕೂಲಿನಾಲಿಯೇ ಆಸರೆ: ಬೇರೆಯವರ ಜಮೀನಿನಲ್ಲಿ ಕೂಲಿನಾಲಿ ಮಾಡಿಯೇ ಯುವಕನ ಕುಟುಂಬ ಹೊಟ್ಟೆಹೊರೆಯುತ್ತಿದೆ. ನಾಲ್ವರು ಗಂಡುಮಕ್ಕಳಲ್ಲಿ ಒಬ್ಬ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ದುಡಿದು ಸಲುಹುತ್ತಿದ್ದ ಮಗನೇ ತಮ್ಮನ್ನು ತೊರೆದಿರುವುದರಿಂದ ತಂದೆ, ತಾಯಿ, ಆತನ ಇಬ್ಬರು ಸೋದರರು ಆಘಾತಗೊಂಡಿದ್ದಾರೆ. ಎಂದಿನಂತೆ ಖಾಸಗಿ ಕಂಪನಿಯ ಕೆಲಸಕ್ಕೆಂದು ಹೋಗಿದ್ದ ಈ ಯುವಕ, ಎರಡು ವರ್ಷಗಳ ಹಿಂದೆಯೇ ನಾಪತ್ತೆಯಾಗಿದ್ದಾನೆ. ಇಂದಲ್ಲ, ನಾಳೆ ಮಗ ಮನೆಗೆ ಬರಲಿದ್ದಾನೆ ಎಂಬ ನಿರೀಕ್ಷೆಯಲ್ಲೇ ತಂದೆ, ತಾಯಿ ದಿನದೂಡುತ್ತಿದ್ದಾರೆ.
ಸೀರೆ ಧರಿಸಿ ಭಿಕ್ಷೆ ಬೇಡುತ್ತಿದ್ದ: ಕೆಲವು ದಿನಗಳ ಹಿಂದೆ ಗ್ರಾಮಸ್ಥರೊಬ್ಬರು ಹುಬ್ಬಳ್ಳಿ-ಬಳ್ಳಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪರಿಚಿತ ಯುವಕ, ಸೀರೆ ಧರಿಸಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಸೀರೆಯಲ್ಲಿದ್ದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವ್ಯಕ್ತಿ ಯುವಕನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದ ಸದಸ್ಯರು ಸೇರಿ ಕೆಲವು ಪರಿಚಿತರು ವಾಹನವೊಂದರಲ್ಲಿ ಕೊಪ್ಪಳದ ಗೌರಿಶಂಕರ ದೇವಾಲಯ ಬಳಿಯ ಮಂಗಳಮುಖಿಯರು ವಾಸಿಸುವ ಮನೆಗಳಿಗೆ ಫೆ.2ರಂದು ಭೇಟಿ ನೀಡಿದ್ದರು.
ತಮ್ಮ ಮಗನನ್ನು ಮನೆಗೆ ವಾಪಸ್‌ ಕಳುಹಿಸಿಕೊಡುವಂತೆ ಹೆತ್ತವರು ಮಂಗಳಮುಖಿಯರ ಬಳಿ ಬೇಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಮಂಗಳಮುಖಿಯರ ಮಧ್ಯೆ ವಾಗ್ವಾದ ನಡೆಯಿತು. ಮಗನ ಮುಖವನ್ನು ಒಮ್ಮೆಯಾದರೂ ನೋಡಿ ಹೋಗುತ್ತೇವೆ ಎಂದು ದುಂಬಾಲು ಬಿದ್ದರೂ ಮಂಗಳಮುಖಿಯರ ಮನಸ್ಸು ಕರಗಿಲ್ಲ ಎನ್ನಲಾಗಿದೆ. ಆ ಯುವಕನ ಬಗ್ಗೆ ತಮಗೆ ತಿಳಿದೇ ಇಲ್ಲ. ಆತ ತಮ್ಮ ಬಳಿ ಇಲ್ಲವೆಂದು ಮಂಗಳಮುಖಿಯರು, ಈ ಜನರನ್ನು ಅಲ್ಲಿಂದ ಸಾಗಹಾಕಿದ್ದಾರೆ.
ಮೂರ್ನಾಲ್ಕು ಜನರಿಗೆ ದರ್ಶನ: ಹುಬ್ಬಳ್ಳಿ-ಬಳ್ಳಾರಿ ರೈಲಿನಲ್ಲಿ ಗ್ರಾಮದ ಮೂರ್ನಾಲ್ಕು ಜನರು ಈ ಯುವಕನ ಗುರುತು ಹಿಡಿದಿದ್ದಾರೆ. ಆದರೆ, ಹೊಸ ವೇಷದಲ್ಲಿ ಯುವಕನನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಇಲ್ಲ. ಯುವಕನ ನಾಪತ್ತೆ ಬಗ್ಗೆ, ಕುಟುಂಬದವರು ಯಾವುದೇ ಠಾಣೆಗೆ ದೂರು ನೀಡಿಲ್ಲ.
ಹಿಂದೆಯೂ ಇಂಥದೇ ಪ್ರಕರಣ: ಯಲಬುರ್ಗಾ ತಾಲೂಕಿನ ಗದ್ದಿಗೇರಿ ತಾಂಡಾದ ಯುವಕನೊಬ್ಬ ಮಂಗಳಮುಖಿಯನ್ನು 2016, ಜೂನ್‌ 21ರಂದು ಮದುವೆಯಾಗಿದ್ದಾನೆ. ಈ ಯುವಕನ ಕುಟುಂಬದವರಿಗೆ ವಿಷಯ ಗೊತ್ತಾಗುತ್ತಿದ್ದಂತೆ, ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತು. ಕುಟುಂಬದವರ ಒತ್ತಾಸೆಯಂತೆ ಈ ಜೋಡಿ ಬೇರೆಯಾಗಿದೆ. ಸದ್ಯ ಈ ಯುವಕ ಹಾಗೂ ಮಂಗಳಮುಖಿ ಕೊಪ್ಪಳದ ಬಾಡಿಗೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ರೈಲಿನಲ್ಲಿ ಚಹಾ ಮಾರಿ, ಯುವಕ ಹೊಟ್ಟೆಹೊರೆಯುತ್ತಿದ್ದಾನೆ.
ನಾಪತ್ತೆಯಾಗಿರುವ ಯುವಕನನ್ನು ಮಂಗಳಮುಖಿಯ ವೇಷದಲ್ಲಿ ಕೆಲವರು ನೋಡಿದ್ದಾಗಿ ಹೇಳುತ್ತಿದ್ದಾರೆ. ಆದರೆ, ಆತ ಇನ್ನೂ ನಮ್ಮ ಕೈಗೆ ಸಿಕ್ಕಿಲ್ಲ. ಆತನನ್ನು ಮಂಗಳಮುಖಿಯನ್ನಾಗಿ ಪರಿವರ್ತಿಸಿರುವುದು ನಿಜವಾಗಿದ್ದರೆ, ತಪ್ಪಿತಸ್ಥರ ವಿರುದ್ಧ ದೂರು ನೀಡಲಾಗುವುದು. ಯುವಕನ ಶೋಧ ಕಾರ್ಯ ಮುಂದುವರಿದಿದೆ.
-ಮುಖಂಡರು, ಹುಣಸಿಹಾಳ ತಾಂಡಾ, ಯಲಬುರ್ಗಾ ತಾಲೂಕು
-vijayakaranataka


loading...

No comments