Breaking News

ಚಿನ್ನಮ್ಮ ಚೆನ್ನೈ ಜೈಲಿಗೆ ವರ್ಗ?


ಬೆಂಗಳೂರು,:ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾ ಖೈದಿಯಾಗಿರುವ ಎಐಎ‌ಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಚೆನ್ನೈ ಜೈಲಿಗೆ ಸ್ಥಳಾಂತರವಾಗಲು ಪ್ರಯತ್ನ ನಡೆಸಿದ್ದಾರೆ.

ಜೀವ ಬೆದರಿಕೆ ಹಿನ್ನೆಲೆಯಲ್ಲಿ ತಮ್ಮನ್ನು ಬೆಂಗಳೂರಿನಿಂದ ಚೆನ್ನೈ ಜೈಲಿಗೆ ವರ್ಗಾವಣೆ ಮಾಡುವಂತೆ ಶಶಿಕಲಾ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಶತಾಯ-ಗತಾಯ ಬೆಂಗಳೂರು ಜೈಲಿನಿಂದ ವರ್ಗಾವಣೆಯಾಗಬೇಕು ಎಂಬ ಶಪಥ ಮಾಡಿರುವ ಶಶಿಕಲಾ ಅವರು ಅದಕ್ಕಾಗಿ ತಮ್ಮದೇ ಆದ ದಾಳ ಉರುಳಿಸಿದ್ದು, ಜೀವ ಬೆದರಿಕೆಯನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ತಮಿಳುನಾಡಿನ ಜೈಲಿಗೆ ಸೇರಲು ಒಳಒಳಗೆ ಲೆಕ್ಕಾಚಾರ ನಡೆಸಿದ್ದು, ಇದರ ಭಾಗವಾಗಿ ಈಗಾಗಲೇ ತಮಿಳುನಾಡಿನ ಗುಪ್ತಚರ ಅಧಿಕಾರಿಗಳು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜನ್ ಅವರಿಗೆ ಜೀವ ಬೆದರಿಕೆ ಇದೆ ಎಂಬ ಮಾಹಿತಿಯನ್ನು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

ತಮಿಳುನಾಡಿನ ಗುಪ್ತಚರ ಇಲಾಖೆಯ ಮಾಹಿತಿಯನ್ನೇ ಮುಂದಿಟ್ಟುಕೊಂಡು ತಮಿಳುನಾಡಿನ ಜೈಲಿಗೆ ಸ್ಥಳಾಂತರಗೊಳ್ಳುವ ಸಂಬಂಧ ಶಶಿಕಲಾ ಅವರು ಸದ್ಯದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತರೆ ತಮಿಳುನಾಡಿನ ರಾಜಕೀಯವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದರ ಬದಲು ತಮಿಳುನಾಡಿನ ಜೈಲಿಗೆ ಸ್ಥಳಾಂತರವಾದರೆ ಅಲ್ಲಿ ಸರ್ಕಾರ ತಮ್ಮದೇ ಆಗಿರುವುದರಿಂದ ರಾಜಕಾರಣವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂಬ ಲೆಕ್ಕಾಚಾರ ಶಶಿಕಲಾ ಅವರದ್ದಾಗಿದೆ.

ತಮಿಳುನಾಡಿನ ಜೈಲಿನಲ್ಲಿದ್ದರೆ ಪರೋಕ್ಷವಾಗಿ ಆಡಳಿತವನ್ನು ಜೈಲಿನಿಂದಲೇ ನಡೆಸಬಹುದು ಎಂಬುದು ಶಶಿಕಲಾ ಅವರ ಮನಸ್ಥಿತಿಯಾಗಿದೆ. ಅಷ್ಟೇ ಅಲ್ಲದೆ ದೈನಂದಿನ ಬದುಕನ್ನು ಆರಾಮವಾಗಿಸಿಕೊಳ್ಳುವ ಲೆಕ್ಕಚಾರ ಅವರದ್ದಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೌಲಭ್ಯ, ಸವಲತ್ತುಗಳಿಗೆ ಅಂಗಲಾಚಬೇಕು. ಅದೇ ತಮಿಳುನಾಡಿನಲ್ಲಿದ್ದರೆ ಜೈಲಿನ ಬದುಕು ಸಹನೀಯವಾಗಿರುತ್ತದೆ ಎಂಬ ಲೆಕ್ಕಾಚಾರದ ಮೇಲೆಯೇ ಶಶಿಕಲಾ ಅವರು ಜೈಲು ವರ್ಗಾವಣೆಯ ತಂತ್ರವನ್ನು ಹೆಣೆದಿದ್ದಾರೆ ಎನ್ನಲಾಗಿದೆ.

ಶಶಿಕಲಾ ಅವರ ಸಿಎಂ ಆಗುವ ಲೆಕ್ಕಾಚಾರ ಸೇರಿದಂತೆ ಎಲ್ಲವೂ ತಲೆಕೆಳಗೆ ಆಗಿರುವುದರಿಂದ ಕರ್ನಾಟಕದಿಂದ ತಮಿಳುನಾಡಿನ ಜೈಲಿಗೆ ವರ್ಗಾವಣೆಯಾಗುವ ಆಶಯ ಕೈಗೂಡುತ್ತವೆಯೋ ಇಲ್ಲವೋ ಎನ್ನುವುದು ನ್ಯಾಯಾಲಯದ ಆದೇಶದ ಮೇಲೆ ನಿಂತಿದೆ.

ಜೈಲಿನಲ್ಲಿ ನಿದ್ದೆ ಮಾ‌ಡದ ಚಿನ್ನಮ್ಮ

ಪರಪ್ಪನ ಅಗ್ರಹಾರ ಜೈಲು ಸೇರಿದ ಮೊದಲ ದಿನ ಖಿನ್ನತೆಯಿಂದಾಗಿ ನಿದ್ದೆ ಇಲ್ಲದೆ ರಾತ್ರಿ ಕಳೆದಿದ್ದ ಚಿನ್ನಮ್ಮ, ನಿನ್ನೆ ತಮ್ಮ ಆಪ್ತ ಯಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಖುಷಿಯಿಂದ ದಿನ ಕಳೆದಿದ್ದು, ನಿನ್ನೆ ರಾತ್ರಿ ಚೆನ್ನಾಗಿಯೇ ನಿದ್ದೆ ಮಾಡಿದರು ಎಂದು ಮೂಲಗಳು ಹೇಳಿವೆ.

ಮೊದಲ ದಿನ ಸರಿಯಾಗಿ ಊಟ ಸೇವಿಸದೆ ಬೇಸರದಿಂದ ಇದ್ದ ಅವರು, ತಮ್ಮ ಪರಮಾಪ್ತನೇ ಮುಖ್ಯಮಂತ್ರಿಯಾದ ನಂತರ ಊಟ, ತಿಂಡಿಗಳನ್ನು ಕಾಲ ಕಾಲಕ್ಕೆ ಮಾಡುತ್ತಿದ್ದು, ಕೊಂಚ ಗೆಲುವಾಗಿಯೇ ಇದ್ದಾರೆ. ಜೈಲಿನಲ್ಲಿ ತಮ್ಮ ಜತೆಯಿರುವ ತಮ್ಮ ಪರಮಾಪ್ತೆ ಇಳವರಸಿ ಜತೆ ಮಾತನಾಡಿಕೊಂಡು ಚಿನ್ನಮ್ಮ ಕಾಲ ಕಳೆಯುತ್ತಿದ್ದಾರೆ. ಚಿನ್ನಮ್ಮನ ಭೇಟಿಗೆ ಬರುವ ಎಲ್ಲರಿಗೂ ಜೈಲಿನ ಅಧಿಕಾರಿಗಳು ಒಳಗೆ ಬಿಡುತ್ತಿಲ್ಲ.

Sanjevani

loading...

No comments