Breaking News

ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದಿದೆ ಹೇಳೋರು, ಕೇಳೋರು ಯಾರೂ ಇಲ್ಲ -HDKಬೆಂಗಳೂರು - ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಕುಸಿದಿದೆ. ಹೇಳೋರು, ಕೇಳೋರು ಯಾರೂ ಇಲ್ಲ. ಅಧಿಕಾರಿಗಳ ಸ್ವೇಚ್ಛಾಚಾರ ಮಿತಿಮೀರಿದೆ. ಬಡವರು, ರೈತರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಇಷ್ಟಾದರೂ ರಾಜ್ಯಪಾಲರ ಭಾಷಣದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಹೇಳಲಾಗಿದೆ. ಎಲ್ಲಿದೆ ಸಮಪಾಲು, ಸಮಬಾಳು ಎಂದು ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಎಳೆ ಎಳೆಯಾಗಿ ಸರ್ಕಾರದ ಆಡಳಿತ ಎಲ್ಲೆಲ್ಲಿ ಹಳಿ ತಪ್ಪಿದೆ ಎಂಬುದನ್ನು ಬಿಡಿಸಿಟ್ಟರು.
ಆಡಳಿತ ವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕಷ್ಟವಾಗುತ್ತದೆ. ವ್ಯವಸ್ಥೆಯನ್ನು ಸರಿಪಡಿಸುವ ಕೆಲಸಗಳು ಆಗಬೇಕಿದೆ ಎಂದರು.
ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೀರಾ, ಎಲ್ಲಿದೆ ಪಾರದರ್ಶಕತೆ, ಅಧಿಕಾರಿಗಳ ಸ್ವೇಚ್ಛಾಚಾರ ಹೆಚ್ಚಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ನರೇಗಾ ಇರಬಹುದು, ಬೆಳೆ ಪರಿಹಾರ ಇರಬಹುದು ಎಲ್ಲದರಲ್ಲೂ ಲೂಟಿ ಮಾಡಲಾಗಿದೆ. ಸತ್ತವರಿಗೆ ಕೂಲಿ ಹಣ ನೀಡಿರುವ ಪ್ರಕರಣವೂ ಇದೆ. ಅಧಿಕಾರಿಗಳಿಗೆ ಭಯ ಭಕ್ತಿ ಇಲ್ಲ ಎಂದರು.
ಅರಣ್ಯ ಇಲಾಖೆಯಲ್ಲಿ ಸಸಿ ನೆಡುವುದರಲ್ಲೂ ಭ್ರಷ್ಟಾಚಾರಗಳು ನಡೆದಿದೆ. ಇಂದಿರಾ ಅವಾಜ್ ಇರಬಹುದು, ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳಿರಬಹುದು ಎಲ್ಲದರಲ್ಲೂ ಭ್ರಷ್ಟಾಚಾರಗಳು ನಡೆಯುತ್ತಿವೆ. ಹೀಗಿರುವಾಗ ಪಾರದರ್ಶಕತೆ ಎಂಬುದಕ್ಕೆ ಅರ್ಥ ಇದೆಯೇ ಎಂದರು.
ಇಂತಹ ಆಡಳಿತ ವ್ಯವಸ್ಥೆಯನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಎಂದರು. ನಗರ ಪ್ರದೇಶಗಳಲ್ಲಿ ಶೂಟೌಟ್‌ಗಳು, ಹಲ್ಲೆಗಳು ರಾಜರೋಷವಾಗಿ ನಡೆಯುತ್ತಿವೆ. ಇದಕ್ಕೆ ಕಾರಣ ಯಾರು ಆಡಳಿತ ನಡೆಸುವವರು ಪರಿಸ್ಥಿತಿಗಳನ್ನು ಸರಿಯಾಗಿ ನಿಭಾಯಿಸಬೇಕು ಎಂದರು.
ಕೃಷ್ಣ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿ ಉಪಕಾಲುವೆಗಳನ್ನು ನಿರ್ಮಿಸಲು 1,33,866 ಎಕರೆ ಭೂಮಿ ಬೇಕು. ಹೊಸ ಭೂಸ್ವಾಧೀನ ಕಾಯ್ದೆಯಂತೆ ಭೂಮಿ ಸ್ವಾಧೀನ ಪರಿಹಾರಕ್ಕೆ 50 ಸಾವಿರಕ್ಕೆ ಕೋಟಿ ಬೇಕು. ಇಷ್ಟು ಹಣವನ್ನು ಒದಗಿಸಿ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಈಗ ಸಾಧ್ಯವೇ ಎಂದು ಪ್ರಶ್ನಿಸಿದರು.
ರೈತರ ಸಾಲ ಮನ್ನಾದ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಕೇಂದ್ರದ ಬಿಜೆಪಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಲ್ಲಿನ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ರೈತರ ಸಾಲ ಮನ್ನಾ ಮಾಡಬಹುದಿತ್ತು. ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಭತ್ತ, ತೊಗರಿ ಹಾಗೂ ಕೊಬ್ಬರಿ ಬೆಳೆಯುವ ರೈತರಿಗೆ ಸರ್ಕಾರದ ಬೋನಸ್ ಹಣವನ್ನು ತಲುಪುತ್ತಿಲ್ಲ. ಕಾರಣ ಸರ್ಕಾರದ ನಿಗದಿ ಮಾಡಿರುವ ಬೆಲೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. ಖರೀದಿ ಕೇಂದ್ರಗಳಿಗೆ ರೈತರು ಭತ್ತವನ್ನಾಗಲೀ, ಕೊಬ್ಬರಿಯನ್ನಾಗಲೀ ನೀಡುತ್ತಿಲ್ಲ. ಸರ್ಕಾರ ಇದನ್ನು ಗಮನಿಸಬೇಕು. ರೈತರ ನೆರವಿಗೆ ಧಾವಿಸಬೇಕು ಎಂದರು.
ಮಹದಾಯಿ ನದಿ ವಿಚಾರದಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಯಮಲೂರಿನ ಜನತೆ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿರುವ ಉದ್ಯಮಿಗಳಿಗೆ ಭೂಮಿಯನ್ನು 99 ವರ್ಷಗಳಿಂದ ಗುತ್ತಿಗೆ ನೀಡುವ ನೀತಿಯಿಂದ ಸಣ್ಣ ಕೈಗಾರಿಕೋದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನೀತಿಯನ್ನು ಹೊಸದಾಗಿ ಜಾರಿ ಮಾಡಿ ಈ ಹಿಂದೆ ಭೂಮಿಗಾಗಿ ಹಣ ಕಟ್ಟಿರುವವರಿಗೆ ಈ ನೀತಿ ಅನ್ವಯ ಮಾಡುವುದು ಬೇಡ ಎಂದರು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜೈಲಿಗೆ ಹೋಗಿ ಬಂದಿದ್ದನ್ನು ಉಲ್ಲೇಖಿಸಿದ್ದು ಸರಿಯಲ್ಲ. ಅನಗತ್ಯವಾಗಿ ರಾಜಕಾರಣಿಗಳ ಮೇಲೆ ಮೊಕದ್ದಮೆಗಳು ದಾಖಲಾಗುತ್ತಿವೆ. ಆ ಪ್ರಕರಣದಲ್ಲಿ ತತ್ವ ಇದೆಯೇ, ಇಲ್ಲವೇ ಎಂಬುದನ್ನು ನೋಡಿ ಮಾತನಾಡಬೇಕು. ಯಡಿಯೂರಪ್ಪನವರ ಪ್ರಕರಣದಲ್ಲಿ ವಾದ-ಪ್ರತಿವಾದ, ಆರೋಪ ಪಟ್ಟಿ ಇಲ್ಲದಿದ್ದರೂ ಅವರಿಗೆ ಜಾಮೀನು ನಿರಾಕರಿಸಿ ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು. ನನ್ನ ಮೇಲೂ ಕೆಲ ಮೊಕದ್ದಮೆಗಳನ್ನು ಹಾಕಲಾಗಿದೆ. ಆದರೆ ಪ್ರಕರಣಗಳಲ್ಲಿ ತತ್ವ ಇದೆಯೇ, ಇಲ್ಲವೇ ಎಂಬುದು ಮುಖ್ಯವಾಗಲಿದೆ ಎಂದರು.
ಸರ್ಕಾರ ಈಗಲಾದರೂ ರೈತರ ನೆರವಿಗೆ ಬರಬೇಕು. ಕೇಂದ್ರದ ನೆರವಿಗೆ ಕಾಯದೆ ರೈತರಿಗೆ ಬೆಳೆ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಒತ್ತಾಯಿಸಿದರು.
ನೋಟು ರದ್ದತಿಯಿಂದ ಎಲ್ಲರಿಗೂ ತೊಂದರೆಯಾಗಿದೆ. ರೈತರಂತೂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರ ನೋಟು ರದ್ದತಿಯಿಂದ ಆದ ತೊಂದರೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು.
ಸಿಎಸ್‌ಟಿ ರಾಜ್ಯಗಳಿಗೆ ಮಾರಕ. ಸಿಎಸ್‌ಟಿ ಜಾರಿಯಾದರೆ ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷೆಗೆ ನಿಲ್ಲಬೇಕಾಗುತ್ತದೆ. ಸಿಎಸ್‌ಟಿ ಜಾರಿ ಮಾಡುವಾಗ ಕೆಲ ಬದಲಾವಣೆಗಳಾಗಬೇಕು. ಈ ಸಂಬಂಧ ಕೇಂದ್ರದ ವಿತ್ತ ಸಚಿವ ಅರುಣ್‌ಜೇಟ್ಲಿ ಅವರಿಗೆ ಪತ್ರ ಬರೆದಿದ್ದೆ ಎಂದು ಅವರು ಹೇಳಿದರು.
loading...

No comments