ಪ್ರೀತಿಸಿ ಕೈಕೊಡಲು ಮುಂದಾದ ಯುವಕನನ್ನು ಒಪ್ಪಿಸಿದ ಯುವತಿ : ಕೂಡಿಬಂದ ಕಂಕಣಭಾಗ್ಯ
ಕುಮಟಾ : ಯುವತಿಯನ್ನು ಪ್ರೀತಿಸಿ ಕೈಕೊಡಲು ಮುಂದಾದ ಯುವಕನನ್ನು ಕೊನೆಗೂ ಒಪ್ಪಿಸಿದ ಯುವತಿಗೆ ಪಟ್ಟಣದ ಕುಂಭೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕಂಕಣಭಾಗ್ಯ ಕೂಡಿಬಂತು.
ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿರ್ಜಾನ್ ನಿವಾಸಿ ಸುಷ್ಮಾ ಫರ್ನಾಂಡಿಸ್ ಅವರಿಗೆ ಪರಿಚಯವಾದ ಹಳದಿಪುರ ಸಾಲಿಕೇರಿಯ ನಿವಾಸಿಯಾದ ಗಿರೀಶ ಮಾಸ್ತಿ ಗೌಡ ಅವರ ಸ್ನೇಹ ಪ್ರೇಮಾಂಕುರಕ್ಕೆ ಕಾರಣವಾಯಿತು. 9 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವ ಜೋಡಿಯ ವಿವಾಹಕ್ಕೆ ಪ್ರಿಯತಮನ ಪಾಲಕರ ಸಮ್ಮತಿ ಅಡ್ಡಿಯಾಗಿತ್ತು. ಹಾಗಾಗಿ ಯುವಕ ಮಾತ್ರ ವಿವಾಹದ ವಿಷಯ ಬಂದಾಗ ನುಣುಚಿಕೊಳ್ಳುತ್ತಿದ್ದ. ಇದರಿಂದ ಬೇಸರಗೊಂಡ ಯುವತಿ ಹಾಗೂ ಅವರ ಕುಟುಂಬದವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಪ್ರಿಯತಮೆಯನ್ನು ವಿವಾಹವಾಗುವುದಾಗಿ ಒಪ್ಪಿಕೊಂಡಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಯುವಕ ತನ್ನ ಹಳೇ ಚಾಳಿಯನ್ನು ಮತ್ತೆ ಮುಂದುವರೆಸಿದಾಗ ಬೇಸರಗೊಂಡ ಯುವತಿ ಭಾವಿ ಪತಿಯ ಮನೆಗೆ ತೆರಳಿ 12 ದಿನಗಳ ಪರ್ಯಂತ ಧರಣಿ ನಡೆಸಿದ್ದಳು. ಇದರಿಂದ ಯುವಕನ ಪಾಲಕರು ವಿವಾಹಕ್ಕೆ ಸಮ್ಮತಿ ಸೂಚಿಸಿದರು. ಹಾಗಾಗಿ ಯುವಕ ಗಿರೀಶ ಅವರು ತನ್ನ ಪ್ರಿಯತಮೆ ಸುಷ್ಮಾ ಅವರೊಂದಿಗೆ ಕುಂಭೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು, ಹೊಸ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಪ್ರಕರಣ ಸುಖಾಂತ್ಯ ಕಾಣಲು ಹಾಗೂ ಈ ಯುವ ಜೋಡಿಯನ್ನು ಒಂದಾಗಿಸಲು ಮಹಿಳಾ ಸಂಘಟನೆ ಹಾಗೂ ಮಿರ್ಜಾನಿನ ಸ್ಥಳೀಯ ಪ್ರಮುಖರು ನೆರವು ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗಿರೀಶ, ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿದರು.
loading...
No comments