Breaking News

ಮೇಯರ್ ಪಟ್ಟ ಬಿಲ್ಲವ ಅಭ್ಯರ್ಥಿಗೆ ಮೀಸಲಾಗುವ ಸಾಧ್ಯತೆ, ಪ್ರತಿಭಾ ಕುಳಾಯಿ ಮತ್ತು ಕವಿತಾ ಸನಿಲ್ ನಡುವೆ ಸ್ಪರ್ಧೆ.

ಮಂಗಳೂರು: ಮಹಾನಗರಪಾಲಿಕೆಯ ಮೇಯರ್ ಆಯ್ಕೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ . ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಲ್ಲಿ ನಡೆಯುತ್ತಿದೆ . ಕಾಂಗ್ರೆಸ್‌ನ ಎಲ್ಲಾ ೧೪ ಮಹಿಳಾ ಕಾರ್ಪೋರೇಟರ್‌ಗಳು ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದರೂ ಬಂಟ, ಕ್ರಿಶ್ಚಿಯನ್, ಜೋಗಿ ಸಮುದಾಯದ ಮಹಿಳೆಯರು ಅವಕಾಶ ವಂಚಿತರಾಗಲಿದ್ದಾರೆ. ಈಗಾಗಲೇ ಆ ಸಮುದಾಯದ ಮಹಾಬಲ ಮಾರ್ಲ, ಜೆಸಿಂತಾ ಹಾಗೂ ಹರಿನಾಥ್ ಮೇಯರ್ ಆಗಿರುವುದರಿಂದ ಇತರೆ ಸಮುದಾಯದವರು ಈ ಬಾರಿ ಮೇಯರ್ ಹುದ್ದೆ ಪಡೆಯಲೇ ಬೇಕೆಂದು ಲಾಬಿ ನಡೆಸುತ್ತಿದ್ದಾರೆ. ಈ ಪೈಕಿ ಮುಸ್ಲಿಮರು, ಮೊಗ ವೀರ ಸಮುದಾಯದವರು ಕೂಡಾ ಮೇಯರ್ ಹುದ್ದೆಗೆ ಲಾಬಿ ನಡೆಸಿದ್ದರೂ ಈ ಬಾರಿ ಮೇಯರ್ ಹುದ್ದೆ ಬಿಲ್ಲವರಿಗೆ ಮೀಸಲಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕವಿತಾ ಸನಿಲ್ ಹಾಗೂ ಪ್ರತಿಭಾ ಕುಳಾಯಿ ಮಧ್ಯೆಯೇ ಸ್ಪರ್ಧೆ ಹೆಚ್ಚಿದೆ. ಇವರ ಮಧ್ಯೆ ಕಳೆದ ಸಾಲಿನಲ್ಲಿ ಸಾಮಾನ್ಯ ಕ್ಷೇತ್ರದಿಂದ ಗೆದ್ದುಬಂದ ಅಪ್ಪಿ ಕೂಡಾ ಮೇಯರ್ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ.

ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಹಿಂದೆ ಪಕ್ಷದ ಅಭ್ಯರ್ಥಿ ವಿರುದ್ದ ಸ್ಪರ್ಧೆಗೆ ಇಳಿದವರಿಗೆ ಅವಕಾಶ ನೀಡಬಾರದೆಂದು ಕಾರ್ಪೊರೇಟರ್‌ಗಳ ನಿಯೋಗ ರಮಾನಾಥ ರೈಯವರಿಗೆ ಬೇಟಿ ಮಾಡಿತ್ತು. ಕವಿತಾಗೆ ಅವರಿಗೆ ಫೈಟ್ ನೀಡುವವರು ಪ್ರತಿಭಾ ಕುಳಾಯಿ. ಉನ್ನತ ಶಿಕ್ಷಣ ಪಡೆದ ಕಾರ್ಪೋರೇಟರ್ ಎಂಬ ಹೆಗ್ಗಳಿಕೆ ಪ್ರತಿಭಾ ಅವರಿಗಿದೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್‌ಡಬ್ಲ್ಯು(ಎಚ್‌ಆರ್‌ಎಂ) ಪದವಿ, ತಮಿಳುನಾಡಿನ ಸೇಲಂ ವಿಶ್ವವಿದ್ಯಾಲಯದಿಂದ ಎಂಎ ಇಂಗ್ಲಿಷ್ ಪದವಿ ಪಡೆದಿದ್ದಾರೆ. ಕಾಲೇಜ್ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿರುವ ಪ್ರತಿಭಾ ಕುಳಾಯಿ ಪಕ್ಷಕ್ಕಾಗಿ ಕೆಲವರ ವಿರೋಧ ಕಟ್ಟಿಕೊಂಡದ್ದೂ ಇದೆ. ಇತ್ತೀಚೆಗೆ ಸುರತ್ಕಲ್‌ನಲ್ಲಿ ಬಿಜೆಪಿಯ ರಸ್ತೆ ರಾಜಕೀಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಿಗೆ ನೇರವಾಗಿ ವಾಗ್ದಾಳಿ ನಡೆಸಿರುವ ಪ್ರತಿಭಾರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಸುರತ್ಕಲ್ ವಲಯ ಕಾಂಗ್ರೆಸ್ ಮುಖಂಡರು ಈಗಾಗಲೇ ಶಾಸಕ ಮೊಯ್ದೀನ್ ಬಾವಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಲ್ಲಿ ಮನವಿ ಮಾಡಿದ್ದಾರೆ.

ಪ್ರತಿಭಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಲ್ಲ. ಪಕ್ಷಕ್ಕಾಗಿ ದುಡಿದವರು. ಪಕ್ಷ ಸಂಘಟಿಸಿದವರು. ಹೀಗಾಗಿ ಪ್ರತಿಭಾವಂತೆಯಾಗಿರುವ ಪ್ರತಿಭಾ ಕುಳಾಯಿಯವರಿಗೆ ಅವಕಾಶ ನೀಡಿ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬಿಲ್ಲವ ಮುಖಂಡರು  ರಮಾನಾಥ ರೈ ಯವರನ್ನು ಭೇಟಿ ಮಾಡಿ ಪ್ರತಿಭಾರನ್ನು ಮೇಯರ್ ಮಾಡಿ  ಬಿಲ್ಲವರಿಗೆ ಅವಕಾಶ ನೀಡಿ ಎಂದಿದ್ದಾರೆ. ಒಟ್ಟಿನಲ್ಲಿ ಮೇಯರ್ ಹುದ್ದೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಲಾಬಿ ಆರಂಭಗೊಂಡಿದೆ.  

loading...

No comments