ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈಗ ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.?
ಮಂಗಳೂರು : ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಳುನಾಡು ಅಂತರಾಷ್ಟ್ರೀಯ ವಿಮಾನವೆಂದು ಮರುನಾಮಕರಣ ಮಾಡಲಾಗಿದೆ.? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಸತ್ಯಾಸತ್ಯತೆ ಗೂಗಲ್ ಮ್ಯಾಪ್ ನಲ್ಲಿ ಪರಿಶೀಲಿಸಿದಾಗ ಅಲ್ಲೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದೇ ತೋರಿಸುತ್ತಿದೆ. ಆದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಬದಲಾಯಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗದಿರುವುದು ಅನುಮಾನಕ್ಕೆ ಎಡೆ ಮಾಡಿದೆ . ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡುವ ಅಗತ್ಯವಿದ್ದು, ಇಲ್ಲವಾದಲ್ಲಿ ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬದಲಾಯಿಸಬೇಕು ಎಂಬ ಕೂಗು ಬಹಳ ಹಿಂದೆಯೇ ಕೇಳಿಬಂದಿತ್ತು. 2014ರಲ್ಲಿ ನಡೆದಿದ್ದ ವಿಶ್ವ ತುಳುವರ ಹಬ್ಬದಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ತುಳುನಾಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟನೆಗಳನ್ನು ತುಳು ಭಾಷೆಯಲ್ಲಿಯೇ ನೀಡುವಂತೆ ನಿರ್ಣಯಗಳನ್ನೂ ಕೈಗೊಳ್ಳಲಾಗಿತ್ತು. ಮೊದಲಿಗೆ ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯಲ್ಪಡುತ್ತಿದ್ದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 1951 ಡಿಸೆಂಬರ್ 25 ರಂದು ಪ್ರಾರಂಭವಾಯಿತು. ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ಮಂಗಳೂರನ್ನು ಸಂಪರ್ಕಿಸುವ ಈ ವಿಮಾನ ನಿಲ್ದಾಣದಲ್ಲಿ ಶಾರ್ಜಾ, ದೋಹಾ, ಬೆಹರಿನ್, ಮಸ್ಕತ್, ಅಬುದಾಬಿ, ದಮಾಮ್ ಮುಂತಾದ ಸ್ಥಳಗಳಿಗೆ ವಿಮಾನ ಸೌಲಭ್ಯಗಳಿವೆ.
ಮಂಗಳೂರಿನ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ದಿನಕ್ಕೆ 40-50 ವಿಮಾನಗಳು ಹಾರಾಟ ನಡೆಸುತ್ತಿದ್ದು, ದೇಶ-ವಿದೇಶಗಳ 25 ವಿಮಾನಗಳು ಆಗಮಿಸಿದರೆ, 25 ವಿಮಾನಗಳು ನಿರ್ಗಮಿಸುತ್ತಿವೆ. ಶನಿವಾರ, ರವಿವಾರ ಹಾಗೂ ಇತರ ರಜಾದಿನಗಳಲ್ಲಿ ಈ ನಿಲ್ದಾಣದಿಂದ ಸುಮಾರು 5,500 ಮಂದಿ ಪ್ರಯಾಣ ಬೆಳೆಸುತ್ತಾರೆ. ಉಳಿದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆ ಇದೆ.
ಸಧ್ಯ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ ಆರು ವಿಮಾನಗಳು ನಿಲ್ಲುವ ವ್ಯವಸ್ಥೆ ಇದ್ದು, ಕೊಚ್ಚಿ ಮೂಲದ ಕಂಪನಿ 4ಕೋಟಿ ವೆಚ್ಚದಲ್ಲಿ ಈಗ ಎರಡು ಹೊಸ ಬೇಸ್ ಗಳ ನಿರ್ಮಾಣ ಮಾಡಿದೆ. ಈ ಬೇಸ್ ಗಳು ಕಾರ್ಯಾರಂಭಗೊಂಡರೆ ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಾಗಿ ಪ್ರಯಾಣಿಕರ ಸಂಖ್ಯೆಯು ಜಾಸ್ತಿಯಾಗಲಿದೆ.
ಗೂಗಲ್ ಮ್ಯಾಪ್ ಲಿಂಕ್ : https://goo.gl/maps/GipJqNQcnks
loading...
No comments