ಮಹಾಶಿವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
ನವದೆಹಲಿ : ದೇಶಾದ್ಯಂತ ಮಹಾ ಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿದ್ದು, ವಿವಿಧ ಶಿವನ ದೇವಾಲಯದ ಎದುರು ಸರತಿ ಸಾಲಲ್ಲಿ ನಿಂತು ಪರಮೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಶಿವರಾತ್ರಿಯ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ, ದೇಶದೆಲ್ಲೆಡೆ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಮೂಲಕ ದೇಶದ ಜನತೆಗೆ ಹೃದಯಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್.
महाशिवरात्रि के इस पावन पर्व पर देशवासियों को हार्दिक शुभकामनाएं।— Narendra Modi (@narendramodi) February 24, 2017
ಶಿವರಾತ್ರಿ ಪ್ರಯುಕ್ತ ದೇಶದ ಪ್ರಮುಖ ಈಶ್ವರನ ದೇವಾಲಯಗಳಾದ ಗುಜರಾತ್ ನ ಸೋಮನಾಥ್ ದೇಗುಲ, ಆಂಧ್ರಪ್ರದೇಶದ ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇಗುಲ, ಉಜ್ಜೈನಿಯ ಮಹಾಕಾಳೇಶ್ವರ ದೇಗುಲ, ಇಂದೋರ್ ನ ಓಂಕಾರೇಶ್ವರ ದೇಗುಲ, ಉತ್ತರಾಖಂಡದ ಕೇದರಾನಾಥ ದೇಗುಲ, ನಾಸಿಕ್ ನಲ್ಲಿರುವ ತ್ರಯಂಬಕೇಶ್ವರ ದೇಗುಲ, ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಅಂತೆಯೇ ಕರ್ನಾಟಕದ ಪ್ರಮುಖ ಈಶ್ವರನ ದೇಗುಲಗಳಾದ ಮುರುಡೇಶ್ವರ ದೇಗುಲ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಲೈ ಮಹದೇಶ್ವ ದೇವಾಲಯ, ಗೋಕರ್ಣ ಮಹಾಬಲೇಶ್ವರ ದೇಗುಲ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ಸೇರಿದಂತೆ ವಿವಿಧ ದೇಗುಲಗಳ ಮುಂದೆ ಸಾವಿರಾರು ಭಕ್ತರು ನೆರೆದಿದ್ದು, ಪರಮೇಶ್ವರನ ದರ್ಶನಕ್ಕಾಗಿ ಸರತಿ ಸಾಲಲ್ಲಿ ನಿಂತಿದ್ದಾರೆ.
ದೇಶದೆಲ್ಲೆಡೆ ಶಿವಾಲಯಗಳಲ್ಲಿ ಶಿವಾರಾಧನೆಗಳು ನಡೆಯುತ್ತಿದ್ದು, ವಾರಣಾಸಿಯಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ಯಮುನಾ, ಗಂಗಾ ನದಿಯಲ್ಲಿ ಭಕ್ತರು ಜಲಾಭಿಷೇಕ ಮಾಡುತ್ತಿದ್ದು, ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಶಿವಭಕ್ತರು ಇಂದು ಬೆಳಿಗ್ಗೆಯಿಂದಲೇ ಉಪವಾಸ ವ್ರತಗಳನ್ನು ಆರಂಭಿಸಿದ್ದಾರೆ.
loading...
No comments