Breaking News

ಬಂದ್ ಕರೆ ನೀಡಿದವರಿಂದ ನಷ್ಟ ವಸೂಲಿ ಮಾಡುತೇನೆ ರಮಾನಾಥ ರೈ



ಖಾದರ್ ಚಪ್ಪಲಿ ಹೇಳಿಕೆಯನ್ನು ಸಮರ್ಥಿಸಿಕೊಂಡ ರೈ

ಮಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭೇಟಿ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಬಂದ್ ಪರಿಣಾಮ ಆಗಿರುವ ನಷ್ಟವನ್ನು ಬಂದ್ ಕರೆ ನೀಡಿದ ಸಂಘಟನೆಗಳಿಂದಲೇ ವಸೂಲಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶನಿವಾರ ಖಾಸಗಿ ಬಸ್ ಓಡಾಟ ನಡೆಸದಿರುವ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಮಂಗಳೂರಿನ ಪ್ರಾದಶೀಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಹೇಳಿದ್ದಾರೆ.

ಕೇರಳ  ರಾಜ್ಯದ ಚುನಾಯಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಕ್ಕೆ ಬಂದಾಗ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಸರಕಾರದ ಜವಾಬ್ದಾರಿ. ಅದರಂತೆ ನಾವು ಭದ್ರತೆ ಒದಗಿಸಿದ್ದೇವೆ” ಎಂದು ಸಚಿವ ರೈ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಂದ್ ಕರೆ ನೀಡುವ ಸಂದರ್ಭದಲ್ಲಿ ಈಗಾಗಲೇ ಕೆಲವರಿಂದ ಬಾಂಡ್ ಸಹಿತ ಮುಚ್ಚಳಿಕೆ ಪತ್ರ ಪಡೆದಿದ್ದು, ನಷ್ಟ ಪರಿಹಾರ ಮತ್ತು ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಯಾವತ್ತೂ ಕೂಡ ಬಂದ್ ಕರೆ ನೀಡಿಲ್ಲ ಎಂದವರು ಹೇಳಿದರು.

“ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬಂದ್ ಆಚರಣೆಯಿಂದ ಆಗುವ ನಾಶ ನಷ್ಟಗಳಿಗೆ ಸಂಘಟಕರು ಹೊಣೆಗಾರರಾಗುತ್ತಾರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದ್ದಾರೆ” ಎಂದ ಸಚಿವರು, ಖಾಸಗಿ ಬಸ್ಸುಗಳ ಮೇಲೆ ನೇರವಾಗಿ ಹೊಣೆಗಾರಿಕೆ ಹೊರಿಸಲು ಸಿದ್ಧರಾಗಲಿಲ್ಲ.

ಬಂದ್ ಸಂದರ್ಭದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು ಅಧಿಕಾರಿಗಳ ಸೂಚನೆ ಹೊರತಾಗಿಯೂ ಕಾನೂನು ಪ್ರಕಾರ ಓಡಾಟ ನಡೆಸದ ಖಾಸಗಿ ಬಸ್ಸುಗಳ ಮಾಲಕರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗುವುದು ಎಂಬುದನ್ನು  ಹೇಳಲಿಲ್ಲ. ಇದಕ್ಕೆ ಕಾರಣ ಖಾಸಗೀ ಬಸ್ ಮಾಲಕರ ಪೈಕಿ ಅವರ ಪಕ್ಷದ ಪ್ರಮುಖರು ಇರುವುದು ಎನ್ನಲಾಗುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ ಸಮಾರಂಭವೊಂದರಲ್ಲಿ ಸಚಿವ ಯು ಟಿ ಖಾದರ್ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರೈ, “ಖಾದರ್ ಹೇಳಿಕೆ ನೀಡಲು ಸ್ವಾತಂತ್ರ್ಯ ಹೊಂದಿದ್ದಾರೆ. ಅವರು ಅಭಿಪ್ರಾಯ ಹೇಳಿದ್ದಾರೆ” ಎಂದು ಸಮರ್ಥಿಸಿಕೊಂಡರು.

ಸಂಪುಟ ಪುನರ್ ರಚನೆ ಕುರಿತ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಂಪುಟ ಪುನರ್ ರಚನೆ ಸೇರಿದಂತೆ ಯಾವುದೇ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಆದರೆ ಈವರೆಗೆ ಸಂಪುಟ ಪುನರ್ ರಚನೆ ಕುರಿತ ಯಾವುದೇ ಮಾಹಿತಿ ನನಗೆ ಲಭ್ಯವಾಗಿಲ್ಲ” ಎಂದಿದ್ದಾರೆ.

loading...

No comments