Breaking News

ಕಪ್ಪ ಸಿಬಿಐ ತನಿಖೆಗೆ ಆಗ್ರಹಿಸಿದ ಬಿಎಸ್‌ವೈ


ಹುಟ್ಟುಹಬ್ಬದ ಪ್ರಯುಕ್ತ  ಸಿದ್ದಗಂಗಾ ಮಠಕ್ಕೆ ಭೇಟಿ

ತುಮಕೂರು :  ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿರುವ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.

ನಗರಕ್ಕೆ ಸಮೀಪವಿರುವ ಸಿದ್ದಗಂಗಾ ಮಠಕ್ಕೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ನೀಡಿ ಮಠಾಧ್ಯಕ್ಷರಾದ ಡಾ| ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಮಠದ ಆವರಣದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸೇರಿದಂತೆ ಸಚಿವರು ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿರುವ ಬಗ್ಗೆ ಸತ್ಯಾಂಶ ತಿಳಿಯಲು ಸಿಬಿಐ ತನಿಖೆ ನಡೆಸಲೇಬೇಕು ಎಂದು ಅವರು ಒತ್ತಾಯಿಸಿದರು.

ಕಪ್ಪ ಪ್ರಕರಣ ಕುರಿತಂತೆ ಆರೋಪ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ಮುಖಂಡರುಗಳು ಮೂರು ದಿನ ಹೊರಗಡೆ ಬಾರದೆ ಮನೆಯಲ್ಲೇ ಇದ್ದರು. ಆದರೆ ಈಗ ಈ ಪ್ರಕರಣದ ಬಗ್ಗೇ ಏನೇನೋ ಹೇಳುತ್ತಿದ್ದಾರೆ. ನಾಡಿನ ಜನತೆಗೆ ಸತ್ಯಾಂಶ ತಿಳಿಯಬೇಕಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಪುನರುಚ್ಚರಿಸಿದರು.

ನನ್ನ ಮೇಲೆ ನಾಡಿನ ಜನರ ಆಶೀರ್ವಾದ ಇದೆ ಎಂದು ತಿಳಿದಿದ್ದೇನೆ. 2018ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಸರ್ಕಾರ ರಚಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಹುಟ್ಟುಹಬ್ಬದ ಅಂಗವಾಗಿ ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಾನು 73 ವಸಂತಗಳನ್ನು ಪೂರೈಸಿ 74ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಹುಟ್ಟುಹಬ್ಬ ಅದ್ದೂರಿ ಆಚರಣೆ ಬೇಡವೆಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮನವಿ ಮಾಡಿದ್ದೇನೆ. ಹೀಗಾಗಿ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯವಾಗಿ ಹಣ ಸಂಗ್ರಹಿಸಿ ಕೆರೆಗಳ ಹೂಳೆತ್ತುವುದು, ಗೋಶಾಲೆ ಆರಂಭಿಸುವುದು, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸುವಂತಹ ಕಾರ್ಯಕ್ರಮವನ್ನು ಇಂದು ರಾಜ್ಯದಲ್ಲೆಡೆ ಹಮ್ಮಿಕೊಂಡಿದ್ದಾರೆ ಎಂದರು.
-sanjevani

loading...

No comments