ಖಾಸಗಿ ಆಸ್ಪತ್ರೆಗಳಿಗೆ ಸದ್ದು ಬಡಿಯಲು ಸಿಎಂ ಚಿಂತನೆ
ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ಎಡತಾಕುವ ಜನರ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿಂದು 78 ಸಂಚಾರಿ ಆರೋಗ್ಯ ಘಟಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವಂತಹ ಗುಣಮಟ್ಟದ ಆರೋಗ್ಯ ವೈದ್ಯರ ಸೇವೆ ಕೆಲ ಖಾಸಗಿ ಆಸ್ಪತ್ರೆಗಳಲ್ಲೂ ಸಿಗುವುದಿಲ್ಲ, ಆದರೂ ಜನ ಸರ್ಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರ ವಸೂಲಿ ಮಾಡುತ್ತಾರೆ ಹಾಗಾಗಿ ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಜನ ಬಳಸಿಕೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಮೆರಿಟ್‌ನಲ್ಲಿ ಓದಿದ ವೈದ್ಯರು ಕೆಲಸ ಮಾಡುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು ಡೊನೇಷನ್ ನೀಡಿ ಓದಿದವರೇ ಹೆಚ್ಚು, ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸೇವಾ ಗುಣಮಟ್ಟ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಏನಲ್ಲ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ನೀಡಿ ಎಂದು ಅರ್ಜಿ ಸಲ್ಲಿಸುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಲಭ್ಯವಿಲ್ಲದಿದ್ದರೆ, ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಎಲ್ಲವೂ ಸರ್ಕಾರಿ ಆಸ್ಪತ್ರೆಯಲ್ಲೇ ಸಿಗುವಾಗ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆಯೇ ಎಂಬ ಬಗ್ಗೆ ಜನ ಯೋಚನೆ ಮಾಡುವುದು ಒಳ್ಳೆಯದು ಎಂದರು.
ಬಡವರಿಗೆ ಹಸಿವಿನ ಮಹತ್ವ ಗೊತ್ತಿರುತ್ತದೆ, ಶ್ರೀಮಂತರಿಗೆ ಗೊತ್ತಾಗುವುದಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗಳಿಗೆ ಬಡವರು, ಹಿಂದುಳಿದವರ ಬಗ್ಗೆ ಕಾಳಜಿ ಕಡಿಮೆ ಎಂದರು.
ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶ. ಅದರಂತೆ ಆರೋಗ್ಯ ಸೇವೆ ಸಿಗದ ಪ್ರದೇಶಗಳಲ್ಲೂ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಆರಂಭಿಸಿರುವುದು ಒಳ್ಳೆಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕೆಲಸವರು ಆಸ್ಪತ್ರೆಗೇ ಹೋಗುವುದಿಲ್ಲ, ರೋಗ ಉಲ್ಭಣವಾಗಿ ಸತ್ತಿರುವ ಉದಾಹರಣೆಗಳೂ ಇವೆ. ಹಾಗಾಗಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುವವರಿಗೆ ಈ ಸಂಚಾರಿ ಆರೋಗ್ಯ ಘಟಕಗಳಿಂದ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಎಂದರು.
ಲಘು ಮಾತು ಬೇಡ
ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು, ಸರ್ಕಾರಿ ಆಸ್ಪತ್ರೆಗಳ ಸೇವೆಗಳ ಬಗ್ಗೆ ಯಾರು ಲಘುವಾಗಿ ಮಾತನಾಡುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಶ್ರೇಷ್ಠತೆಯಿಂದ ಸರ್ಕಾರಿ ಆಸ್ಪತ್ರೆಗಳು ಕೆಲಸ ಮಾಡುತ್ತಿವೆ. ಸಿಬ್ಬಂದಿಗಳೂ ಸಹ ಸಾರ್ವಜನಿಕರಿಂದ ಗೌರವ ಸಿಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಇಂದು ಲೋಕಾರ್ಪಣೆಗೊಂಡಿರುವ ಸಂಚಾರಿ ಆರೋಗ್ಯ ಘಟಕಗಳು ಗುಡ್ಡಗಾಡು ಪ್ರದೇಶಗಳಲ್ಲಿ ಇರುವ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿವೆ. ಜನಸಾಮಾನ್ಯರ ಮನೆ ಬಾಗಿಲಿಗೆ ಆರೋಗ್ಯ ಒದಗಿಸುವ ಉದ್ದೇಶದಿಂದ ಈ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಘಟಕಗಳು ಕಾರ್ಯನಿರ್ವಹಿಸಲಿವೆ ಎಂದರು.
ಈ ಸಂಚಾರಿ ಆರೋಗ್ಯ ಘಟಕಗಳಲ್ಲಿ ಒಬ್ಬ ವೈದ್ಯರು, ಸಹಾಯಕರು, ಲ್ಯಾಬ್ ಟೆಕ್ನೀಷಿಯನ್, ಫಾರ್ಮಾಸಿಸ್ಟ್ ಇರುತ್ತಾರೆ ಎಂದ ಅವರು, ಆರಂಭದಲ್ಲಿ 72 ಸಂಚಾರಿ ಘಟಕಗಳನ್ನು ಆರಂಭಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು 130 ವಾಹನಗಳನ್ನು ಈ ಯೋಜನೆಗೆ ನಿಯೋಜಿಸುವ ಉದ್ದೇಶವಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, ಸಂಚಾರಿ ಆರೋಗ್ಯ ಘಟಕಗಳ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಈ ಯೋಜನೆಯ ಲೋಕಾರ್ಪಣೆ ಮಾಡಿದರು.
loading...
No comments