Breaking News

ಸಾತನೂರು ಬೇಟೆಗಾರನನ್ನು ಗುಂಡಿಟ್ಟು ಕೊಂದ ಅರಣ್ಯಾಧಿಕಾರಿಗಳು ?

ಸಾತನೂರು: ಚೀಲಂದವಾಡಿ ಕಾವೇರಿ ವನ್ಯಜೀವಿ ವಲಯದ ಚೀಲಂದವಾಡಿ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಬೇಟೆಗಾರರ ತಂಡ ಹಾಗೂ ಅರಣ್ಯಾಧಿಕಾರಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ.

ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯ ಗುರುಮೂರ್ತಿ (23) ಮೃತವ್ಯಕ್ತಿ. ಘಟನೆಯಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಸಂಗಮ ವಲಯದ ಬೆಂಡಗೂಡು ಸಮೀಪದ ಚೆಕ್‌ಪೋಸ್ಟ್‌ ಬಳಿಯ ಇಲಾಖೆಯ ಕಟ್ಟಡವನ್ನು ಧ್ವಂಸಗೊಳಿಸಿ, ರಸ್ತೆಯಲ್ಲಿ ಆಟೊಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಕ್‌ಪೋಸ್ಟ್‌ ಬಳಿ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆಯೇ ಸಿಬ್ಬಂದಿ ಪರಾರಿಯಾಗಿದ್ದಾರೆ. ಇದೇ ವೇಳೆ ಓಡುತ್ತಿದ್ದ ಸಿಬ್ಬಂದಿಯನ್ನು ಹಿಡಿದು ಮನಸೋ ಇಚ್ಛೆ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ರಮೇಶ್‌ಬಾನತ್‌ ಸ್ಥಳಕ್ಕಾಗಿಮಿಸಿ ಪರಿಸ್ಥಿತಿ ತಹಬಂದಿಗೆ ತಂದಿದ್ದಾರೆ.


ನ್ಯಾಯ ಕೊಡಿ:

'ಇದ್ದ ಒಬ್ಬನೇ ಮಗನನ್ನು ಅರಣ್ಯಾಧಿಕಾರಿಗಳು ಗುಂಡಿಕ್ಕಿ ಕೊಂದು ಇಲ್ಲಿ ತಂದು ಹಾಕಿದ್ದಾರೆ. ನಮ್ಮನ್ನು ಯಾರು ಸಾಕುತ್ತಾರೆ, ನಮಗೆ ದಿಕ್ಕು ಯಾರು, ನಮಗೆ ನ್ಯಾಯಬೇಕು' ಎಂದು ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.

ಗುಂಡಿಟ್ಟವರು ಯಾರು?

ಮೃತ ಗುರುಮೂರ್ತಿ ಯಾರ ಗುಂಡಿಗೆ ಬಲಿಯಾದ ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಬೇಟೆಗೆ ತೆರಳುವ ಮಾಹಿತಿ ಬುಧವಾರ ರಾತ್ರಿಯೇ ಲಭಿಸಿತ್ತು. ಅರಣ್ಯ ಸಿಬ್ಬಂದಿ ತಂಡಗಳು ಬೆನ್ನಟ್ಟುತ್ತಿದ್ದಂತೆ, ಬೇಟೆಗಾರರ ತಂಡವೂ ಗುಂಡಿನ ದಾಳಿ ನಡೆಸುತ್ತಲೇ ಚೆಲ್ಲಾಪಿಲ್ಲಿಯಾಗಿ ಓಡಿದೆ. ಈ ಸಂದರ್ಭಲ್ಲಿ ಯಾರ ಗುಂಡೇಟಿನಿಂದ ವ್ಯಕ್ತಿ ಸತ್ತಿದ್ದಾನೆಂದು ತಿಳಿಯುತ್ತಿಲ್ಲ. ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಬೇಟೆಗಾರರು ಒಂದು ಜಿಂಕೆ ಹಾಗೂ ಕಾಡುಹಂದಿಯನ್ನು ಕೊಂದಿದ್ದು ಅವರಿಂದ ಒಂದು ನಾಡ ಬಂದೂಕು, ಹೆಡ್‌ ಟಾರ್ಚ್‌ ವಶಕ್ಕೆ ಪಡೆದು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ವಲಯ ಅರಣ್ಯಧಿಕಾರಿ ಶಿವರಾಮ್‌ ತಿಳಿಸಿದ್ದಾರೆ.
-vk

loading...

No comments