Breaking News

ಟ್ರಾಫಿಕ್ ಪೋಲೀಸರ ಕತ್ತಿನಲ್ಲಿ ನೇತಾಡಲಿದೆ ಕ್ಯಾಮೆರಾ


ಲಂಚ ಬಾಕತನಕ್ಕೆ ಬೀಳಲಿದೆ ಬ್ರೇಕ್

ಬೆಂಗಳೂರು: ಪೊಲೀಸರು ಅಂದ್ರೆ ಲಂಚಬಾಕರು ಅನ್ನೋ ಅಪವಾದ ಸಹಜ. ಅದಕ್ಕೆ ತಕ್ಕಂತೆ ಎಷ್ಟೋ ಸಮಯಗಳಿಂದ ಸಂಚಾರಿ ಪೊಲೀಸರು ಲಂಚಕ್ಕೆ ಕೈ ಒಡ್ಡುತ್ತಿದ್ರು. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಬ್ರೇಕ್ ಬೀಳಲಿದೆ. ಜೊತೆಗೆ ರಾತ್ರಿ ವೇಳೆ ಪೊಲೀಸರ ಗಸ್ತಿಗೂ ಸಹಕರಿಸಲಿದೆ.
ಹೌದು. ಇಷ್ಟು ದಿನ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ನೋಡಿದ್ವಿ. ಏನೇ ಅಪರಾಧಗಳಾದ್ರೂ ಅದ್ರಲ್ಲಿ ಇಂಚಿಂಚೂ ರೆಕಾರ್ಡ್ ಆಗ್ತಿತ್ತು. ಆದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ ಟ್ರಾಫಿಕ್ ಪೊಲೀಸರೇ ಲಂಚಕ್ಕೆ ಕೈ ಚಾಚುತ್ತಿದ್ದಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ಆದ್ರೆ ಇನ್ಮುಂದೆ ಇದಕ್ಕೆಲ್ಲಾ ಬ್ರೇಕ್ ಬೀಳಲಿದೆ. ಯಾಕಂದ್ರೆ ಪೊಲೀಸರ ಲಂಚಾವತಾರ ಇನ್ಮುಂದೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಲಿದೆ. ಅದು ಹೇಗಂದ್ರೆ ಇದಕ್ಕಾಗಿಯೇ ಬಾಡಿ ಕ್ಯಾಮೆರಾಗಳು ಇದೀಗ ಸಂಚಾರಿ ಪೊಲೀಸ್ ಇಲಾಖೆಗೆ ಎಂಟ್ರಿಯಾಗಿದೆ. ಹೀಗಾಗಿ ಸಂಚಾರಿ ಪೊಲೀಸರು ತಮ್ಮ ಕೆಲಸದ ಅವಧಿಯಲ್ಲಿ ಈ ಕ್ಯಾಮೆರಾವನ್ನು ಧರಿಸಿಯೇ ಕೆಲಸ ನಿರ್ವಹಿಸಬೇಕಾಗಿದೆ.

ಚಿಕ್ಕ ಗಾತ್ರದ ಈ ಕ್ಯಾಮೆರಾವನ್ನು ಸಂಚಾರಿ ಪೊಲೀಸರು ಟ್ಯಾಗ್ ಮೂಲಕ ಎದೆ ಭಾಗದಲ್ಲಿ ಧರಿಸ್ತಾರೆ. ಇದ್ರಲ್ಲಿ ಪೊಲೀಸರ ಎದುರು ನಡೆಯುವ ಎಲ್ಲಾ ಘಟನೆಗಳು ಇಂಚಿಂಚಾಗಿ ರೆಕಾರ್ಡ್ ಆಗಲಿದೆ. ಈ ವೇಳೆ ಒಂದೊಮ್ಮೆ ಪೊಲೀಸರು ಸಾರ್ವಜನಿಕರಿಂದ ಲಂಚ ಪಡೆದ್ರೆ ಅವ್ರ ಲಂಚಾವತಾರ ಕ್ಯಾಮೆರಾ ಮೂಲಕ ಬಟಾಬಯಲಾಗಲಿದೆ. ಹೀಗಾಗಿ ಒಂದು ಹಂತಕ್ಕೆ ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂಬ ಭರವಸೆಯನ್ನೂ ಈ ಬಾಡಿ ಕ್ಯಾಮೆರಾ ಮೂಡಿಸಿದೆ. ಹಾಗೆ ಸಾರ್ವಜನಿಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ಪೊಲೀಸರ ಮೇಲೆ ಆಗುವ ಹಲ್ಲೆಗಳ ಬಗ್ಗೆಯೂ ಈ ಬಾಡಿ ಕ್ಯಾಮೆರಾ ವಾಸ್ತವತೆಯನ್ನು ತೆರಿದಿಡಲಿವೆ.

ಈಗಾಗಲೇ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಬಾಡಿ ಕ್ಯಾಮೆರಾದ ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿಗೆ ಇದೀಗ ತಾನೆ ಎಂಟ್ರಿ ಕೊಟ್ಟಿದ್ದು, ಪ್ರಾಯೋಗಿಕವಾಗಿ 50 ಕ್ಯಾಮೆರಾಗಳನ್ನು ತರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಕ್ಯಾಮೆರಾ ಮೂಲಕವಾದ್ರು ಪೊಲೀಸರ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳುತ್ತಾ? ಮತ್ತು ತಪ್ಪು ಮಾಡಿ ಪೊಲೀಸರ ಮೇಲೆ ಗೂಬೆ ಕೂರಿಸೋರಿಗೆ ಬುದ್ಧಿ ಬರುತ್ತಾ ಕಾದು ನೋಡಬೇಕಿದೆ.
-public tv 
loading...

No comments