ಮೂಡುಬಿದಿರೆ ಶಾಲಾ ಕಟ್ಟಡದ ದೋಷದ ಬಗ್ಗೆ ಹಳೆ ವಿದ್ಯಾರ್ಥಿ ಬರೆದ ಪತ್ರಕ್ಕೆ ಪ್ರಧಾನಿ ಸ್ಪಂದನೆ
ಮಂಗಳೂರು : ಮೂಡುಬಿದಿರೆಯ ಶಾಲಾ ದುರವಸ್ಥೆ ಬಗ್ಗೆ ಹಳೆ ವಿದ್ಯಾರ್ಥಿಯೊಬ್ಬ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಎರಡೂ ಕಚೇರಿಗಳು ನೋಟಿಸ್ ಸ್ವೀಕರಿಸಿವೆ.
ಮೂಡುಬಿದಿರೆಯ ಅಲಿಯೂರು ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ರಂಜಿತ್ ಮಲ್ಲ ತಾನು ಕಲಿತ ಶಾಲಾ ಕಟ್ಟಡದ ದುರವಸ್ಥೆಯ ಬಗ್ಗೆ ಪತ್ರದಲ್ಲಿ ಬರೆದಿದ್ದಾನೆ. ಇತ್ತೀಚೆಗೆ ಆತ ಶಾಲೆಗೆ ಭೇಟಿಯಿತ್ತ ಸಂದರ್ಭ ಶಾಲೆಯ ದುರವಸ್ಥೆಯನ್ನು ಕಂಡು ಮಾತುಗಳೇ ಹೊರಡಲಿಲ್ಲ. ಶಾಲಾ ಕಟ್ಟಡ ಅವಶೇಷಗಳಂತೆ ಉಳಿದಿವೆ. ಈ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ದೂರವಿರುವ ವಿವಿಧ ಶಾಲೆಗಳಿಗೆ ದಾಖಲಾಗಿದ್ದಾರೆ. ಶಾಲೆಯಲ್ಲಿ 7ನೇವರೆಗೆ ತರಗತಿಗಳು ನಡೆಯುತ್ತಿದ್ದರೂ 2015ರಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ 5 ರಿಂದ 7ನೇವರೆಗಿನ ಕಟ್ಟಡಗಳನ್ನು ಜಿಲ್ಲಾ ಪಂಚಾಯತ್ ನೆಲಸಮ ಮಾಡಿದೆ ಎಂದು ರಂಜಿತ್ ಪತ್ರದಲ್ಲಿ ಬರೆದಿದ್ದಾರೆ.
“ಅವರು ಕೈಗೊಂಡ ನಿರ್ಧಾರವನ್ನು ಒಪ್ಪುತ್ತೇನೆ, ಆದರೆ ನೆಲಸಮ ಮಾಡಿದ ಸ್ಥಳದಲ್ಲಿ ಹೊಸ ಕಟ್ಟಡವನ್ನು ಸಮರ್ಪಕ ಸಮಯದಲ್ಲಿ ನಿರ್ಮಿಸಬೇಕಾಗಿತ್ತು. ಹಾಗೆ ಮಾಡಲಿಲ್ಲ. ನಾನು ಇತ್ತೀಚೆಗೆ ಪ್ರಧಾನಿಗಳ ಕೇಂದ್ರೀಕೃತ ಸಾರ್ವಜನಿಕ ಅಹವಾಲು ಮತ್ತು ನಿರ್ವಹಣೆ ವ್ಯವಸ್ಥೆಗೆ ದೂರು ನೀಡಿದ್ದಾಗ, ಇದು ತಕ್ಷಣ ದೂರಿನ ಪ್ರತಿಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಮತ್ತು ಜಿಲ್ಲಾಧಿಕಾರಿಗೆ ವರ್ಗಾವಣೆ ಮಾಡಿತ್ತು. ಆದರೆ ಎರಡೂ ಕಚೇರಿಗಳು ನಿರ್ಧಿಷ್ಟ ಕ್ರಮ ಕೈಗೊಳ್ಳುವಲ್ಲಿ ವಿಫಲವಾದವು. ಈ ದೂರು ವರದಿ ಸಲ್ಲಿಕೆಯ ನೆಪದಲ್ಲಿ ಅಭಿವೃದ್ಧಿ ಅಧಿಕಾರಿಗಳ ಮುಂದೆ ಬ್ಲಾಕ್ ಆಯಿತು.
ಇದಾದ ಬಳಿಕ ರಂಜಿತ್ ನೇರವಾಗಿ ಪ್ರಧಾನಿಗೆ ಪತ್ರ ಬರೆದು ಅಹವಾಲನ್ನು ತೋಡಿಕೊಂಡಿದ್ದಾರೆ. ಪ್ರಧಾನಿ ಕಚೇರಿಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಶಾಲಾ ಹೊಸ ಕಟ್ಟಡ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಬಿಇಒಗೆ ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
loading...
No comments