Breaking News

ಮೋದಿ ಸಾಮಾಜಿಕ ತಾಣಗಳಿಗೆ ಸರಕಾರದ ಖರ್ಚು ಎಷ್ಟು ಗೊತ್ತೇ



ಹೊಸದಿಲ್ಲಿ: ಜಗತ್ತಿನಲ್ಲೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಮುಖ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಗಣ್ಯರು. ಆದರೆ, 2014ರ ಮೇ ನಲ್ಲಿ ಅವರು ಅಧಿಕಾರ ಸ್ವೀಕರಿಸಿದಂದಿನಿಂದಲೂ ಸಾಮಾಜಿಕ ಜಾಲತಾಣಗಳ ಮೂಲಕ ಜನತೆಯನ್ನು ತಲುಪಲು ಪ್ರಧಾನ ಮಂತ್ರಿಗಳ ಕಚೇರಿಯಿಂದ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ.

ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಆರ್‌ಟಿಐ ಮೂಲಕ ಪಡೆದ ವಿವರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಪ್ರಧಾನಿ ಕಾರ್ಯಾಲಯದ ಮೂಲಕ (ಪಿಎಂಓ) ಯಾವುದೇ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಅಥವಾ ಗೂಗಲ್ ಖಾತೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುತ್ತಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿದೆ.

ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಮೊಬೈಲ್ ಆ್ಯಪ್ ಅನ್ನು 'ಪಿಎಂಓ ಇಂಡಿಯಾ' ವನ್ನು ಮೈಗವ್ ಮತ್ತು ಗೂಗಲ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ. ಆ್ಯಪ್ ಅಭಿವೃದ್ಧಿಪಡಿಸಿದವರಿಗೆ ಬಹುಮಾನ ನೀಡಿದ ಹಣದ ಹೊರತಾಗಿ ಬೇರಾವುದೇ ಖರ್ಚು ಮಾಡಿಲ್ಲ. ಬಹುಮಾನದ ಹಣವನ್ನೂ ಗೂಗಲ್‌ ನೀಡಿದೆ' ಎಂದು ಉತ್ತರದಲ್ಲಿಹೇಳಲಾಗಿದೆ.

ಸಿಸೋಡಿಯಾ ಆರ್‌ಟಿಐಗೆ ದೊರೆತ ಉತ್ತರದಲ್ಲಿ, ನರೇಂದ್ರ ಮೋದಿ ಆ್ಯಪ್ ಅನ್ನು ಪ್ರಧಾನಿ ಕಾರ್ಯಾಲಯ ಅಥವಾ ಭಾರತ ಸರಕಾರ ಅಭಿವೃದ್ಧಿಪಡಿಸಿಲ್ಲ, ನಿರ್ವಹಿಸುತ್ತಲೂ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗಿದ್ದರೂ ನಾಗರಿಕರು ಪ್ರಧಾನಿ ಜತೆ ಸಂಪರ್ಕ ಸಾಧಿಸಲು ಈ ಆ್ಯಪ್ ಅನ್ನು ಬಳಸುತ್ತಿದ್ದಾರೆ. www.pmindia.gov.in and www.mygov.in. ಜಾಲತಾಣಗಳಿಗೆ ಪೂರಕವಾಗಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್‌ಟಿಐ ಉತ್ತರ ತಿಳಿಸಿದೆ.

ಹೀಗಾಗಿ ನರೇಂದ್ರ ಮೋದಿ ಆ್ಯಪ್ ನಿರ್ವಹಣೆಗೆ ಸಾರ್ವಜನಿಕರ ತೆರಿಗೆ ಹಣ ಬಳಕೆಯಾಗುತ್ತಿಲ್ಲ ಎಂಬುದೂ ಸ್ಪಷ್ಟವಾಗಿದೆ. ನರೇಂದ್ರ ಮೋದಿ ಆ್ಯಪ್ನ ಡೆವಲಪರ್ ಪುಟವನ್ನು ಗಮನಿಸಿದರೆ ಅಲ್ಲಿ ಬಿಜೆಪಿಯ ಐಟಿ ಘಟಕ ಅದನ್ನು ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದೆ ಎಂಬ ಮಾಹಿತಿ ಸಿಗುತ್ತದೆ.

ತಮ್ಮತಿಂಗಳ 'ಮನ್‌ಕೀ ಬಾತ್' ಕಾರ್ಯಕ್ರಮದ ಆರಂಭಿಕ ಕಂತುಗಳ ಪ್ರಚಾರಕ್ಕೆ ಜಾಹೀರಾತುಗಳನ್ನು ಬಿಡುಗಡೆ ಮಾಡಿದ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಸಂಗತಿಯನ್ನು ಆಕಾಶವಾಣಿಯ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಹೀಗಾಗಿ ಮನ್‌ಕೀ ಬಾತ್‌ ಕಾರ್ಯಕ್ರಮಕ್ಕೆ ಇತ್ತೀಚೆಗೆ ಆಕಾಶವಾಣಿ ಏನನ್ನೂ ಖರ್ಚು ಮಾಡುತ್ತಿಲ್ಲ. ಆದರೆ ಅದರಿಂದ ವ್ಯಾಪಕ ಲಾಭ ಪಡೆಯುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದರು.

loading...

No comments