ಒಡಿಶಾ ರೈಲ್ವೆ ಕಂಟ್ರೋಲ್ ರೂಮ್ ಮೇಲೆ ನಕ್ಸಲ್ ದಾಳಿ
ಭುವನೇಶ್ವರ : ಮಾವೋವಾದಿಗಳು ಒಡಿಶಾ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಮುಂಜಾನೆ 2.30ರ ಸುಮಾರಿನಲ್ಲಿ 30ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ರೈಲು ನಿಲ್ದಾಣದ ಮೇಲೆ ದಾಳಿ ನಡೆಸಿದ್ದೂ ಅಲ್ಲದೆ ಸರಕು ಸಾಗಾಣೆಯ ರೈಲಿನ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ರೈಲು ನಿಲ್ದಾಣ ಹಾಗೂ ರೈಲು ಸ್ಫೋಟಗೊಂಡಿದೆ.
ನಕ್ಸಲರು ರೈಲು ನಿಲ್ದಾಣ ಮತ್ತು ಸರಕು ಸಾಗಾಣೆಯ ರೈಲಿನ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪೂರಿ-ಅಹಮದಾಬಾದ್ ಎಕ್ಸ್‌ಪ್ರೆಸ್ ರೈಲನ್ನು ರಾಯಘಡದಲ್ಲೇ ತಡೆದು ನಿಲ್ಲಿಸಲಾಗಿದೆ.
ಇದೇ ವೇಳೆ ಎನ್ರಾಕುಳಂ – ಹಟಿಯಾ ಎಕ್ಸ್‌ಪ್ರೆಸ್ ರೈಲನ್ನು ಬೋಬಿಲ್ಲಿ ನಿಲ್ದಾಣದಲ್ಲಿ ಹಾಗೂ ವಿಶಾಖಪಟ್ಟಣಂ-ದುರ್ಗ್ ಪ್ಯಾಸೆಂಜರ್ ರೈಲನ್ನು ಜಿನಿಡಿಪೇಟದಲ್ಲಿ ಮತ್ತು ಕೋರಾಪುಟ್ -ಸಂಬಲ್‌ಪುರ್ ರೈಲು, ವಿಶಾಖಪಟ್ಟಣಂ-ರಾಯಪುರ ಎಕ್ಸ್‌ಪ್ರೆಸ್, ಭುವನೇಶ್ವರ್ -ಜುಗನ್‌ಘರ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳ ಸಂಚಾರ ವ್ಯತ್ಯಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಎಸ್.ಕೆ. ಪರೀದ 30ಕ್ಕೂ ಹೆಚ್ಚು ಶಸ್ತ್ರಸಜ್ಜಿತ ನಕ್ಸಲರು ಕಚೇರಿಯಲ್ಲಿ ಒಳಗಿದ್ದ ಎಲ್ಲರನ್ನು ಹೊರದಬ್ಬಿ ಬಾಂಬ್ ದಾಳಿ ನಡೆಸಿದರು. ಅಲ್ಲದೆ ಆಗಷ್ಟೇ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಸರಕು ಸಾಗಾಣೆಯ ರೈಲಿನ ಮೇಲೆ ಬಾಂಬ್ ದಾಳಿ ನಡೆಸಿದರು ಎಂದು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ರಾಯಘಡ ಪೊಲೀಸ್ ವರಿಷ್ಠಾಧಿಕಾರಿ ಕೆ. ಶಿವಸುಬ್ರಮಣಿ ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.
loading...
No comments