Breaking News

ಕೇಸರಿ ಶಾಲು ಧರಿಸದ ವಿದ್ಯಾರ್ಥಿ ಮೇಲೆ ಹಲ್ಲೆ

file photo

ಭಟ್ಕಳ, ಉತ್ತರಕನ್ನಡ  : ಕಳೆದ ಕೆಲ ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ರಂಗಿಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದ್ದ ಬುರ್ಕಾ ವಿವಾದ ತಣ್ಣಗಾಗುವ ಮೊದಲೇ ಅದೇ ಕಾಲೇಜು ಮತ್ತೊಂದು ಘಟನೆಯಿಂದ ಸುದ್ದಿಯಲ್ಲಿದೆ. ಕಾಲೇಜಿಗೆ ಕೇಸರಿ ಶಾಲು ಧರಿಸದೆ ಬಂದ ಹಿಂದೂ ವಿದ್ಯಾರ್ಥಿಯೋರ್ವನಿಗೆ ಕೇಸರಿ ಶಾಲು ಧರಿಸಿದ್ದ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಹಲ್ಲೆಗೊಳಗಾದ ವಿದ್ಯಾರ್ಥಿ ಹಲ್ಲೆ ಮಾಡಿದ ನಾಲ್ವರ ಮೇಲೆ ಪೋಲೀಸ್ ಕೇಸು ದಾಖಲಿಸಿದ್ದಾನೆ.
ಕಾಲೇಜಿಗೆ ಮುಸ್ಲಿಂ ಧರ್ಮೀಯ ಶಿಕ್ಷಕಿಯರು ಬುರ್ಕಾ ಧರಿಸಿ ಬರುವುದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆಗೆ ನಡೆಸಿದ್ದರು. ನಂತರ ಕೆಲ ಹಿಂದೂ ವಿದ್ಯಾರ್ಥಿಗಳು ಹಿಂದೂ ಸಂಘಟನೆ ಬೆಂಬಲದೊಂದಿಗೆ ಕೇಸರಿ ಶಾಲು ಹೆಗಲ ಮೇಲೆ ಧರಿಸಿ ಕಾಲೇಜಿಗೆ ಆಗಮಿಸ ತೊಡಗಿದ್ದರು.ಇವರಿಗೆ ಬೆಂಬಲವಾಗಿ ಕೆಲ ಶಿಕ್ಷಕರೂ ವಿದ್ಯಾರ್ಥಿಗಳ ಬೆನ್ನಿಗೆ ನಿಂತು ಕೇಸರಿ ಶಾಲು ಧರಿಸಿದ್ದರು.

ಈ ಬಗ್ಗೆ ತಾಲೂಕು ಆಡಳಿತ, ಪೋಲೀಸ್ ಅಧಿಕಾರಿಗಳು ಹಾಗೂ ನಾಮ್ದಾರಿ ಸಮುದಾಯದ ನಾಯಕರು ವಿದ್ಯಾರ್ಥಿಗಳಲ್ಲಿ ಕೇಸರಿ ಶಾಲು ಧರಿಸಿ ಅನಗತ್ಯ ವಿವಾದ ನಡೆಸದಂತೆ ಮನವೊಲಿಕೆಗೆ ಯತ್ನಿಸಿದರೂ ವಿದ್ಯಾರ್ಥಿಗಳು ಮನಸ್ಸು ಬದಲಾಯಿಸಲಿಲ್ಲ. ಮುಸ್ಲಿಂ ಪ್ರಾಧ್ಯಾಪಕಿಯರು ಬುರ್ಕಾ ಧರಿಸಿ ಬರುವವರೆಗೆ ತಾವೂ ಕೇಸರಿ ಶಾಲು ಧರಿಸುವುದಾಗಿ ಹಠ ಹಿಡಿದಿದ್ದರು. ಈ ವಿಷಯವಾಗಿ ಮಾತನಾಡಿದ್ದ ಸಹಾಯಕ ಕಮೀಷನರ್ ಎಮ್.ಎನ್.ಮಂಜುನಾಥ್ 'ಪ್ರತಿಯೊಬ್ಬರಿಗೆ ಅವರವರ ಇಷ್ಟದ ಬಟ್ಟೆ ತೊಡುವ ಹಕ್ಕಿದೆ, ಆದರೆ ಈ ಸಂಬಂಧ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆಯನ್ನೂ' ನೀಡಿದ್ದರು.

ಕೇಸರಿ ಧರಿಸುತ್ತಿದ್ದ ವಿದ್ಯಾರ್ಥಿಗಳು ಕೇಸರಿಶಾಲು ಧರಿಸದ ವಿದ್ಯಾರ್ಥಿಗಳಲ್ಲಿ ಕೇಸರಿ ಶಾಲು ಧರಿಸಿ ಬರುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರದಂದು ಕೇಸರಿ ಶಾಲು ಧರಿಸದೇ ಕಾಲೇಜಿಗೆ ಬಂದ ಜಯಂತ್ ನಾಯ್ಕ್ ಮೇಲೆ ರಾಘವೇಂದ್ರ, ಜೀವನ್, ಸಂದೀಪ್, ಅಭಿಷೇಕ್ ನಾಲ್ವರು ಸೇರಿ ಹಲ್ಲೆ ನಡೆಸಿದ್ದಾರೆ. ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

No comments