ದೇಸಿ ಹಸು ಸಾಕಾಣಿಕೆ ಮಾಡುವರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರ್ಕಾರ
ನವದೆಹಲಿ: ದೇಸಿ ಹಸುಗಳ ತಳಿ ಸಂರಕ್ಷಣೆ ಮತ್ತು ಬಲವರ್ಧನೆ ಮಾಡುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಗೋವುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಗೋಪಾಲಕರು ಮತ್ತು ಗೋಶಾಲೆಗಳಿಗೆ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದೆ. ಎರಡನೇ ಬಹುಮಾನವಾಗಿ 3 ಲಕ್ಷ ರೂ. ಮತ್ತು ಮೂರನೇ ಬಹುಮಾನವಾಗಿ 1 ಲಕ್ಷ ರೂ. ನೀಡಲು ಉದ್ದೇಶಿಸಲಾಗಿದೆ. ಒಟ್ಟು 30 ಬಹುಮಾನಗಳನ್ನು ನೀಡಲಾಗುತ್ತದೆ.
ದೇಸಿ ಆಕಳನ್ನು ಉತ್ತಮವಾಗಿ ಪಾಲನೆ ಮಾಡುತ್ತಿರುವ ರೈತರು ಮತ್ತು ಗೋಶಾಲೆ ಅಥವಾ ತಳಿ ಸಂವರ್ಧನೆಯಲ್ಲಿ ತೊಡಗಿರುವವರ ಹೆಸರನ್ನು ಮಾರ್ಚ್ 31ರೊಳಗೆ ಕಳುಹಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ. ‘ಗೋಪಾಲ ರತ್ನ’ ಮತ್ತು ‘ಕಾಮಧೇನು’ ಪ್ರಶಸ್ತಿ ನೀಡುವ ಮೂಲಕ ಪಶುಪಾಲಕರನ್ನು ಪ್ರೋತ್ಸಾಹಿಸಿ, ವೈಜ್ಞಾನಿಕವಾಗಿ ಹಸುಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡುವ ಉದ್ದೇಶ ಹೊಂದಿದೆ.
ವಾರ್ಷಿಕ 50 ಲಕ್ಷ ದೇಸಿ ಹಸು
ಗೋ ತಳಿಗಳ ಸಂರಕ್ಷಣೆಗೆ ಹಿಂದಿನ ಸರ್ಕಾರ ಮುತುವರ್ಜಿ ವಹಿಸದ ಕಾರಣ 39 ದೇಸಿ ತಳಿಗಳಲ್ಲಿ ಶೇ.74ರಷ್ಟು ತಳಿಗಳು ಕೃತಕ ಗರ್ಭಧಾರಣೆ ಯೋಜನೆಯಿಂದ ಹೊರಗುಳಿದಿವೆ ಎಂದು ಎನ್ಡಿಎ ಸರ್ಕಾರ ಹೇಳಿದೆ. ನಾಡ ಹಸುಗಳ ಸಂತತಿ ಹೆಚ್ಚಿಸಲು ದೊಡ್ಡ ಮಟ್ಟದ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಉತ್ಕೃಷ್ಟವಾದ 500 ಹೋರಿಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಇವು ಗಳನ್ನು ಬಳಸಿಕೊಂಡು 7 ಸಾವಿರದಷ್ಟು ಶ್ರೇಷ್ಠ ದರ್ಜೆಯ ಹಸುಗಳನ್ನು ಪಡೆಯಲಾಗುವುದು. ಈ ಹಸುಗಳಿಂದ ವಾರ್ಷಿಕವಾಗಿ 50 ಲಕ್ಷ ದೇಸಿ ಹಸುಗಳನ್ನು ಸೃಷ್ಟಿಸಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ದೇವೇಂದ್ರ ಚೌಧರಿ ತಿಳಿಸಿದರು.
-vijayavani
loading...
No comments