ಕಾಟಾಚಾರಕ್ಕೆ ಸೀಮಿತವಾದ ಆಂಜನೇಯ ಕೊರಗರ ಹಾಡಿ ಗ್ರಾಮ ವಾಸ್ತವ್ಯ
ಕುಂದಾಪುರ : ಕೊರಗರ ಹಾಡಿಗೆ ಗ್ರಾಮ ವಾಸ್ತವ್ಕ್ಕಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಮುರೂರಿಗೆ ಬಂದಾಗ ವಿಷಯ ರಾಜ್ಯಮಟ್ಟದಲ್ಲಿ ಪ್ರಚಾರ ಪಡೆದಿತ್ತು. 2017ರ ಜ 1ರಂದು ರಾತ್ರಿ ಮೂಲಭೂತ ಸೌಕರ್ಯ ವಂಚಿತ ಮುರೂರು ಹಾಡಿಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಆಂಜನೇಯ ಅವರ ಜೊತೆಗೆ ಜಿಲ್ಲಾಧಿಕಾರಿ, ಸರಕಾರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಬಂದಿದ್ದರು. ಗ್ರಾಮ ವಾಸ್ತವ್ಯ ಕಳೆದು 2 ತಿಂಗಳು ಪೂರ್ಣಗೊಂಡರೂ ಇಲ್ಲಿನ ಜನತೆಯ ಕಷ್ಟದ ಬದುಕು ಮುಂದುವರಿದಿದೆ. ಸಚಿವರ ಹಾಡಿ ವಾಸ್ತವ್ಯಕ್ಕೆ ಕೇಂದ್ರವಾದ ಮರ್ಲಿ ಕೊರಗರ ಬೇಡಿಕೆಗಳು ಒಂದೂ ಈಡೇರಿಲ್ಲ.
ಮುರೂರಿನ ಕೊರಗ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಿಸಲಾಗಿದ್ದ ಸೇತುವೆ ಕಾಮಗಾರಿ ಸಚಿವರ ಹಾಡಿ ವಾಸ್ತವ್ಯಕ್ಕಿಂತ ಮುಂಚೆಯೇ ಅರ್ಧಂಬರ್ಧ ನಿರ್ಮಾಣವಾಗಿ ನಿಂತಿತ್ತು. ಸಚಿವರು ಕೂಡಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಕಾಮಗಾರಿ ಮುಂದುವರಿದಿಲ್ಲ. ಈ ಸೇತುವೆ ಇಲ್ಲಿನ ಜನರನ್ನು ಅಣಕಿಸುತ್ತಿದೆ.
ಹಾಡಿ ವಾಸ್ತವ್ಯದ ದಿನ ಮೂರೂರಿನಲ್ಲಿ ಸಭಾಭವನಕ್ಕೆ ಸಚಿವರು ಶಿಲಾನ್ಯಾಸ ನೆರವೇರಿಸಿದ್ದರು. ಶಿಲಾನ್ಯಾಸಕ್ಕಾಗಿ ಗಡಿಬಿಡಿಯಲ್ಲಿ ಭೂಮಿ ಸಮತಟ್ಟು ಮಾಡಲಾಗಿತ್ತು. ಶಿಲಾನ್ಯಾಸ ನಡೆಸಿದ ಗುರುತು ಮಾತ್ರ ಇದೆ. ಮತ್ತೆ ಅಲ್ಲಿಗೆ ಕಟ್ಟಡ ನಿರ್ಮಾಣದ ಕಲ್ಲಾಗಲಿ, ಮರಳು, ಜಲ್ಲಿ ಯಾವ ಸರಕೂ ಬಂದಿಲ್ಲ.
ಸಚಿವರು ವಾಸ್ತವ್ಯ ಮಾಡಿದ ಮರ್ಲಿ ಕೊರಗರ ಮನೆಯ ಸಮೀಪದಲ್ಲಿ ಮೂರು ಕೊರಗ ಕುಟುಂಬದ ಮನೆ ಕಾಮಗಾರಿ ಅರ್ಧಕ್ಕೆ ನಿಂತು ಕೆಲವು ವರ್ಷವಾಗಿತ್ತು. ಇದನ್ನು ಕಂಡ ಸಚಿವರು ಕೂಡಲೇ ಅದನ್ನು ನಿರ್ಮಾಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇನ್ನೂ ಕೂಡಾ ಕುಟುಂಬ ಪುಟ್ಟ ಜೋಪಡಿಯಲ್ಲಿಯೇ ವಾಸಿಸುತ್ತಿದೆ. ಮನೆ ನಿರ್ಮಾಣಕ್ಕೆ ಯಾವ ಅಧಿಕಾರಿಯೂ ಆಸಕ್ತಿ ತೋರಿಸುತ್ತಿಲ್ಲ. ಮೂರು ಮನೆಗೂ ವಿದ್ಯುತ್ ಸಂಪರ್ಕ ಕೊಡಿ ಎಂದು ಆದೇಶ ಮಾಡಿದ ಸಚಿವರ ಆದೇಶಕ್ಕೆ ಬೆಲೆಯೇ ಇಲ್ಲ.
ಐಟಿಡಿಪಿ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ ಎಂದಷ್ಟೇ ಉತ್ತರಿಸಿ ಮೌನವಾಗುತ್ತಾರೆ ಇಲ್ಲಿನ ಮುಗ್ದ ಮಹಿಳೆಯರು. ಮಳೆಗಾಲ ಹತ್ತಿರದಲ್ಲಿದೆ. ಮಳೆಗಾಲದಲ್ಲಿ ನಾವು ಹೇಗೆ ಈ ಜೋಪಡಿಯಲ್ಲಿ ವಾಸಿಸುವುದು ಎನ್ನುವ ಕೊರಗು ಅವರದ್ದು.
ಸ್ವ ಉದ್ಯೋಗ ಕಲ್ಪಿಸುವ ಬಗ್ಗೆ ಆ ದಿನ ಸಚಿವರು ಭರವಸೆ ನೀಡಿದ್ದರು. ಸಭಾಭವನ ನಿರ್ಮಾಣ ಮಾಡಿ ಅಲ್ಲಿ ಕೈ ಮಗ್ಗದಂತಹ ಸ್ವ ಉದ್ಯೋಗ ಆರಂಭಿಸುವ ಮೂಲಕ ಇಲ್ಲಿನ ಜನತೆ ಸ್ವ ಉದ್ಯೋಗಕ್ಕೆ ಪ್ರೇರೇಪಿಸಬೇಕು ಎಂದಿದ್ದರು.
ಹಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಹಕ್ಕು ಪತ್ರವಿಲ್ಲದಿರುವುದನ್ನು ಸಚಿವರಿಗೆ ಸ್ಥಳೀಯರು ತಿಳಿಸಿದ್ದರು. ತ್ರಿಫೇಸ್ ಕರೆಂಟ್ ಕೊಡಬೇಕು ಎಂದಿದ್ದರು. ಹತ್ತಿರದ ಕಪ್ಪಾಡಿ ಶಾಲೆಯ ಬೀಳುವ ಸ್ಥಿತಿಯಲ್ಲಿದ್ದು ದುರಸ್ತಿಗೊಳಿಸಿ ಎಂದಿದ್ದರು. ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಕಚ್ಛಾರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ವಿನಂತಿಸಿದ್ದರು. ಎಲ್ಲಾ ಬೇಡಿಕೆಗಳನ್ನು ಸಚಿವರು ತಕ್ಷಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರೆ ಯಾವೂದೂ ಆಗಿಲ್ಲ. ಒಟ್ಟಿನಲ್ಲಿ ಸಚಿವರ ಗ್ರಾಮ ವಾಸ್ತವ್ಯ ಕೇವಲ ಕಾಟಾಚಾರಕ್ಕಷ್ಟೇ ಸೀಮಿತವಾಯಿತು ವಿನಾ ಹಾಡಿಯ ಜನರ ಬದುಕಿಗೆ ಏನೂ ಚೇತೋಹಾರಿಯಾಗಲಿಲ್ಲ.
k-ale
loading...
No comments