Breaking News

ಬರಲಿದೆ ೨೦೦ರ ಹೊಸ ನೋಟು



ನವದೆಹಲಿ : ೨೦೦ ರೂಪಾಯಿಯ ಹೊಸ ನೋಟು ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಆಡಳಿತ ಮಂಡಳಿ ಹಸಿರು ನಿಶಾನೆ ತೋರಿದೆ. ಈ ಸಂಬಂಧ ಕಳೆದ ತಿಂಗಳೇ ಆರ್‌ಬಿಐ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್, ನಾಲ್ಕು ಮಂದಿ ಉಪ ಗವರ್ನರ್‌ಗಳು,ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶಶಿಕಾಂತ್ ದಾಸ್,ಹಣಕಾಸು ಕಾರ್ಯದರ್ಶಿ ಅಂಜುಲಿ ಚಿಂಬ್ ದುಗ್ಗಲ್ ನೇತೃತ್ವದ ೧೪ ಮಂದಿ ಆಡಳಿತ ಮಂಡಳಿ ಸಭೆಯಲ್ಲಿ ಹೊಸದಾಗಿ ೨೦೦ ರೂಪಾಯಿ ನೋಟು ಚಲಾವಣೆಗೆ ತರಲು ಹಸಿರು ನಿಶಾನೆ ತೋರಿದ್ದಾರೆ.

ನೋಟು ಅಮಾನ್ಯದ ಬಳಿಕ ೨ ಸಾವಿರ ಮತ್ತು ೫೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. ಅದರಲ್ಲಿಯೂ ೨ ಸಾವಿರ ರೂಪಾಯಿಗೆ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಸಾಮಾನ್ಯರು ಪರದಾಡುವಂತಾಗಿತ್ತು. ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್, ೨೦೦ ರೂಪಾಯಿ ನೋಟು ಚಲಾವಣೆಗೆ ತರಲು ನಿರ್ಧರಿಸಿದ್ದು, ಜೂನ್ ತಿಂಗಳ ಬಳಿಕ ಈ ನೋಟುಗಳ ಮುದ್ರಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಆರ್‌ಬಿಐ ಇದೇ ಮೊದಲ ಬಾರಿಗೆ ೨೦೦ ರೂಪಾಯಿ ನೋಟು ಪರಿಚಯಿಸುವ ಮೂಲಕ ಜನರ ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಆದರೆ ಇದುವೆರಗೂ ಆರ್‌ಬಿಐ ೨೦೦ ರೂಪಾಯಿಯ ಹೊಸ ನೋಟುಗಳನ್ನು ಮುದ್ರಿಸುವ ಹಾಗು ಚಲಾವಣೆಗೆ ತರುವ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆ ಆಡಳಿತ ಮಂಡಳಿಯ ಸದಸ್ಯರೂ ಬಾಯಿ ಬಿಟ್ಟಿಲ್ಲ. ಆದರೆ ೨೦೦ ರೂಪಾಯಿ ನೋಟು ಮುದ್ರಿಸುವ ಬಗ್ಗೆ ನಿರ್ಧರಿಸಲಾಗಿದೆ ಎನ್ನುವುದಂತೂ ಖಚಿತ ಎಂದು ಹೇಳಲಾಗಿದೆ.

loading...

No comments