Breaking News

ಮರಳು ದಂಧೇ ಕೋರರ ಅಟ್ಟಹಾಸ ಉಡುಪಿ ಜಿಲ್ಲಾಧಿಕಾರಿ ಕೊಲೆ ಯತ್ನ



ಉಡುಪಿ : ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗನ್‌ಮ್ಯಾನ್ ಪೃಥ್ವಿರಾಜ್ ಜೋಗಿ, ಕುಂದಾಪುರದ ಸಹಾಯಕ ಕಮಿಷನರ್ ಶಿಲ್ಪಾ ನಾಗ್, ಅವರ ಪತಿ ಶಂಕರಲಿಂಗ ಹಾಗೂ ಗ್ರಾಮ ಲೆಕ್ಕಿಗ ಕಾಂತರಾಜು ಅವರ ಮೇಲೆ ದಂಧೆಕೋರರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ತಡರಾತ್ರಿ ೧೧:೩೦ರ ಸುಮಾರಿಗೆ ನಡೆದಿದೆ. ಸುಮಾರು ೫೦ರಷ್ಟು ಮಂದಿಯಿದ್ದ ಮರಳು ದಂಧೆಕೋರರು ಕಲ್ಲು, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದು ಜಿಲ್ಲಾಧಿಕಾರಿಯವರು ಘಟನಾಸ್ಥಳದಿಂದ ಪಾರಾಗಿ ಬಂದು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉಡುಪಿ ಎಸ್‌ಪಿ ವಿಷ್ಣುವರ್ಧನ ನೇತೃತ್ವದ ಪೊಲೀಸ್ ತಂಡ ಆರು ಮಂದಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.



ಘಟನೆಯ ವಿವರ:
ಕುಂದಾಪುರ ತಾಲೂಕಿನ ಕಂಡ್ಲೂರಿನ ವಾರಾಹಿ ನದಿಯಲ್ಲಿ ಕೆಲವು ಸಮಯಗಳಿಂದ ನಿರಂತರ ಅಕ್ರಮ ಮರಳುಗಾರಿಕೆ ನಡೆಯುತ್ತಲೇ ಇತ್ತು. ಈ ಬಗ್ಗೆ ಗ್ರಾಮಸ್ಥರು, ಸ್ಥಳೀಯ ಕೆಲ ಸಂಘಟನೆಗಳು ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಿತ ವಿವಿಧ ಇಲಾಖೆಗಳಿಗೆ ದೂರು ನೀಡುತ್ತಲೇ ಬಂದಿದ್ದರು. ಆದರೆ ಯಾವುದೇ ದಾಳಿ ನಡೆಯದ ಹಿನ್ನೆಲೆಯಲ್ಲಿ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಲೇ ಇತ್ತು. ಇತ್ತೀಚೆಗಷ್ಟೇ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೂತನ ಜಿಲ್ಲಾಧಿಕಾರಿಯಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು ದಂಧೆಕೋರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರು. ಅದರಂತೆ ನಿನ್ನೆ ರಾತ್ರಿ ೧೦:೩೦ರ ಸುಮಾರಿಗೆ ಘಟನಾಸ್ಥಳಕ್ಕೆ ದಿಢೀರ್ ದಾಳಿ ನಡೆಸಲು ಜಿಲ್ಲಾಧಿಕಾರಿ ಮುಂದಾಗಿದ್ದರು. ಉಡುಪಿಯಿಂದ ಖಾಸಗಿ ವಾಹನದಲ್ಲಿ ಹೊರಟ ಜಿಲ್ಲಾಧಿಕಾರಿ ಮತ್ತವರ ಗನ್‌ಮ್ಯಾನ್‌ಗೆ ಕುಂದಾಪುರದಲ್ಲಿ ಸಹಾಯಕ ಕಮಿಷನರ್ ಶಿಲ್ಪಾ ನಾಗ್, ಪತಿ ಶಂಕರಲಿಂಗ ಹಾಗೂ ಗ್ರಾಮ ಲೆಕ್ಕಿಗ ಕಾಂತರಾಜು ಜೊತೆಯಾಗಿದ್ದಾರೆ. ಅದರಂತೆ ತಂಡ ಮೊದಲು ಕುಂದಾಪುರದ ಹಳ್ನಾಡು ಎಂಬ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತಂಡ ದಾಳಿ ನಡೆಸಿ, ಅಲ್ಲಿದ್ದ ೬ ಮಂದಿಯನ್ನು ವಶಕ್ಕೆ ಪಡೆದು ಬೈಕ್‌ಗಳನ್ನು ಸೀಝ್ ಮಾಡಿತ್ತು. ಅಲ್ಲಿಂದ ಮುಂದಕ್ಕೆ ತೆರಳುವಾಗ ಜಿಲ್ಲಾಧಿಕಾರಿ ತಂಡವಿದ್ದ ವಾಹನಗಳನ್ನು ಬೈಕ್‌ಗಳನ್ನು ದಂಧೆಕೋರರು ಹಿಂಬಾಲಿಸಿಕೊಂಡು ಬಂದಿದ್ದರು ಎನ್ನಲಾಗಿದೆ.
ಕಂಡ್ಲೂರಿನ ವಾರಾಹಿ ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ತಂಡ ದೋಣಿ ಬಳಸಿ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆಹಚ್ಚಿದೆ. ಈ ವೇಳೆ ಸ್ಥಳದಲ್ಲಿ ಒಟ್ಟುಸೇರಿದ ಸುಮಾರು ೫೦ರಷ್ಟು ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ. ಕಲ್ಲು, ಮಾರಕಾಸ್ತ್ರಗಳಿಂದ ಮುಗಿಬಿದ್ದ ವೇಳೆ ಗನ್ ಮ್ಯಾನ್ ವಿರೋಧ ವ್ಯಕ್ತಪಡಿಸಿದ್ದು, ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಘಟನಾಸ್ಥಳದಿಂದ ಪಾರಾಗಿ ಬಂದ ಜಿಲ್ಲಾಧಿಕಾರಿ ಮತ್ತವರ ತಂಡ ತಕ್ಷಣವೇ ಸಹಾಯಕ್ಕಾಗಿ ಕುಂದಾಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಅಲ್ಲಿಂದ ತಕ್ಷಣ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಥಳೀಯರ ಸಹಕಾರ ಪಡೆದು ಜಿಲ್ಲಾಧಿಕಾರಿ ಹಾಗೂ ತಂಡ ಉಡುಪಿ ನಗರ ಠಾಣೆಗೆ ಆಗಮಿಸಿ ದೂರನ್ನು ಸಲ್ಲಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಎಸ್‌ಪಿ ವಿಷ್ಣುವರ್ಧನ ನೇತೃತ್ವದ ತಂಡ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದೆ.
ಆರು ಮಂದಿ ಸೆರೆ
ಜಿಲ್ಲಾಧಿಕಾರಿ ಮತ್ತವರ ತಂಡದ ಮೇಲಿನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರು ಬಿಹಾರ, ಉತ್ತರ ಪ್ರದೇಶ ಮೂಲದವರಾಗಿದ್ದು ಬಂಧಿತರ ವಿವರ ಇನ್ನಷ್ಟೇ ಲಭಿಸಬೇಕಿದೆ. ಕಂಡ್ಲೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಮರಳುಗಾರಿಕೆ ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಹಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯವರ ಮೇಲೆಯೇ ಮರಳು ದಂಧೆಕೋರರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ.
‘ಬಂದವರು ಯಾರೆಂದು ತಿಳಿಯದೆ ಕೃತ್ಯ’
‘ಪ್ರಿಯಾಂಕಾ ಮತ್ತು ಶಿಲ್ಪಾನಾಗ್ ಅವರು ಸ್ಥಳೀಯ ಪೊಲೀಸರಿಗೆ ತಿಳಿಸದೆ ಮತ್ತು ಸರ್ಕಾರಿ ವಾಹನದಲ್ಲಿ ತೆರಳದೆ ಖಾಸಗಿ ವಾಹನದಲ್ಲಿ ಕಾರ್ಯಾಚರಣೆಗೆ ತೆರಳಿದ್ದರು ಹೀಗಾಗಿ ಬಂದವರು ಯಾರು ಎನ್ನುವುದು ತಿಳಿಯದೆ ದಾಳಿ ನಡೆದಿದೆ. ಜಿಲ್ಲಾಧಿಕಾರಿಯ ಗನ್‌ಮ್ಯಾನ್ ಅಲ್ಲಿದ್ದ ಮನೆಯೊಂದಕ್ಕೆ ನುಗ್ಗಿ ಒಬ್ಬನನ್ನು ಎಳೆತರುವ ವೇಳೆ ಘರ್ಷಣೆ ನಡೆದಿದೆ. ಘಟನೆಯನ್ನು ಅವಲೋಕಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ’ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ದಂಧೆಕೋರರ ಜೊತೆ ಇಲಾಖೆ ಶಾಮೀಲು?
ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೀತಾ ಇರೋದು ಇಂದು ನಿನ್ನೆಯಿಂದಲ್ಲ. ವಾರಾಹಿ ನದಿ ತೀರದ ಕಂಡ್ಲೂರು, ಹೇರಿಕುದ್ರು, ಉಪ್ಪಿನಕುದ್ರು, ಬಿಲ್ಲಾಡಿ ಪ್ರದೇಶಗಳಲ್ಲಿ ಮರಳು ದಂಧೆ ಚಿಗಿತುಕೊಂಡಿದ್ದು ಪ್ರತಿನಿತ್ಯ ನೂರಾರು ಲೋಡ್‌ಗಳಷ್ಟು ಮರಳು ಸಾಗಣೆ ನಡೆಯುತ್ತಲೇ ಇದೆ. ಕೆಲತಿಂಗಳ ಹಿಂದೆ ಗ್ರಾಮಸ್ಥರು ದಂಧೆ ನಿಲ್ಲಿಸುವಂತೆ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ದಂಧೆ ಮಾತ್ರ ನಿರಾತಂಕವಾಗಿ ನಡೆಯುತ್ತಿತ್ತು ಎನ್ನುವುದು ಗಮನಾರ್ಹ. ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಹೇಮಲತಾ ಅವರು ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದರು. ಆದರೆ ಅವರು ಜಿಲ್ಲೆಯಿಂದ ನಿರ್ಗಮಿಸಿದ ಬಳಿಕ ಮತ್ತೆ ಯಥಾಸ್ಥಿತಿ ಮುಂದುವರಿದಿತ್ತು. ಕುಂದಾಪುರ ತಹಶಿಲ್ದಾರ್ ಅವರು ಈ ಹಿಂದೆ ಕಂಡ್ಲೂರಿಗೆ ದಾಳಿ ನಡೆಸಿದ್ದರು. ಈ ವೇಳೆ ಅವರ ಮೇಲೂ ತಂಡವೊಂದು ದಾಳಿ ನಡೆಸಿತ್ತು. ಶಿಲ್ಪಾ ನಾಗ್ ಅವರು ಕಳೆದ ನವೆಂಬರ್ ೨೧ರಂದು ಕುಂದಾಪುರ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಬಳಿಕ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಹಲವು ಕಡೆಗಳಿಗೆ ದಾಳಿ ನಡೆಸಿದ್ದರು. ಕಂಡ್ಲೂರಿನಲ್ಲೂ ಈ ಹಿಂದೆ ದಾಳಿ ನಡೆಸಿ ಶೆಡ್‌ಗಳನ್ನು ನಾಶಪಡಿಸಲಾಗಿತ್ತು. ಆದರೆ ಮತ್ತೆ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನಿನ್ನೆ ಏಕಕಾಲಕ್ಕೆ ದಾಳಿ ನಡೆಸಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದಾಳಿ ನಡೆಸಿದರೆ ದಂಧೆಕೋರರಿಗೆ ದಾಳಿಗೂ ಮೊದಲೇ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ. ನಿನ್ನೆಯೂ ಜಿಲ್ಲಾಧಿಕಾರಿ ಅವರು ತಡರಾತ್ರಿ ರಕ್ಷಣೆ ಕೋರಿ ಕುಂದಾಪುರ ಠಾಣೆಗೆ ಕರೆ ಮಾಡಿದ್ದರೂ ಪೊಲೀಸರು ತಕ್ಷಣಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಕುಂದಾಪುರ ಠಾಣೆಯಲ್ಲಿ ದೂರು ನೀಡುವ ಬದಲು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ದಂಧೆಕೋರರು ರಾಜಾರೋಷವಾಗಿ ದಾಳಿ ನಡೆಸಿದ್ದು ನೋಡಿದರೆ ಅಕ್ರಮ ದಂಧೆಯಲ್ಲಿ ಪೊಲೀಸ್ ಸಹಿತ ವಿವಿಧ ಇಲಾಖೆಗಳು ಶಾಮೀಲಾಗಿರುವ ಜನರ ಶಂಕೆಯನ್ನು ಅಲ್ಲಗಳೆಯುವಂತಿಲ್ಲ.
-sanjevani

loading...

No comments