Breaking News

ಸುಪ್ರೀಂ ಕೋರ್ಟ್ ನಿಯಮ ಉಲಂಘನೆ : ಹೆರಿಗೆಯಾದ ಉಪನ್ಯಾಸಕಿ ಸೇವೆಯಿಂದ ವಜಾ


ಕುಂದಾಪುರ : ಸೇವೆಯಲ್ಲಿದ್ದಾಗಲೇ ಆಸ್ಪತ್ರೆಗೆ ಸೇರಿದ್ದ ಉಪನ್ಯಾಸಕಿಗೆ ನಿಯಮ ಉಲ್ಲಂಘಿಸಿ ಸೇವೆಯಿಂದ ವಜಾಗೊಳಿಸಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ನೊಂದ ಮಹಿಳೆ ಕಾಲೇಜಿನ ವಿರುದ್ಧ ಸಮರ ಸಾರಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಅದೇ ಕಾಲೇಜಿನ ಕನ್ನಡ ಸಹಾಯಕ ಉಪನ್ಯಾಸಕಿ ಸೌಮ್ಯಾ ಎಂಬವರೇ ಕಾನೂನು ಸಮರಕ್ಕೆ ಸಿದ್ಧರಾದವರು. ಹೇರಿಕುದ್ರು ನಿವಾಸಿಯಾಗಿರುವ ಸೌಮ್ಯಾ ಅವರು ಸ್ವತಃ ತಮಗಾದ ನೋವು ಮತ್ತು ಅವಮಾನಕ್ಕೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಗೆ ದೂರನ್ನೂ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಹೇರಿಕುದ್ರು ನಿವಾಸಿಯಾಗಿರುವ ಸೌಮ್ಯಾ ಕಳೆದ ಒಂದು ವರ್ಷದಿಂದ ಕುಂದಾಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಭಂಡಾರಕಾರ್ಸ್ ಆಟ್ರ್ಸ್ ಮತ್ತು ಸಯನ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜನವರಿ 31ರ 2017ರಂದು ಆಕೆ ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಕುಸಿದು ಬಿದ್ದರು.

ಏಳು ತಿಂಗಳ ಗರ್ಭಿಣಿಯಾಗಿದ್ದ ಸೌಮ್ಯಾರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದಾಗ ಗರ್ಭಕೋಶ ಹರಿದಿರುವುದು ತಿಳಿಯುತ್ತದೆ. ತಕ್ಷಣವೇ ಹೆರಿಗೆ ಮಾಡಬೇಕು ಇಲ್ಲದಿದ್ದರೆ ತಾಯಿ ಮಗು ಇಬ್ಬರ ಜೀವಕ್ಕೂ ಅಪಾಯವಿದೆ ಎಂದ ವೈದ್ಯರ ಸಲಹೆ ಮೇರೆಗೆ 6 ಫೆಬ್ರವರಿ 2016ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತದೆ. ಮಗುವಿನ ತೂಕ 1.3 ಕೇಜಿ ಇದ್ದ ಕಾರಣ ಮಗುವನ್ನೂ ಐಸಿಯುನಲ್ಲಿಡಲಾಗಿತ್ತು.

ಆದರೆ ಇದೆಲ್ಲವೂ ತಿಳಿದಿದ್ದ ಕಾಲೇಜು ಆಡಳಿತ ಮಂಡಳಿ ಮಾತ್ರ ಸೌಮ್ಯಾ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಇದ್ದಕ್ಕಿದ್ದಂತೆ ಸೇವೆಯಿಂದ ವಜಾ ಮಾಡಲಾಗಿದೆ ಎಂಬುದಾಗಿ ನೋಟಿಸ್ ನೀಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನೊಂದ ಸೌಮ್ಯಾ ಅವರು ಸಂಬಂಧಪಟ್ಟವರಿಗೆ ದೂರು ನೀಡಿದ್ದು, 2014ರ ಕೋರ್ಟ್ ಆದೇಶ ಮತ್ತು 2016ರ ಕಾಯ್ದೆಯ ಪ್ರಕಾರ ಹೆರಿಗೆ ಸೌಲಭ್ಯ ಕೊಡುವ ಬಗ್ಗೆ ಆಡಳಿತ ಮಂಡಳಿ ಪ್ರಸ್ತಾಪ ಮಾಡದೇ ಸೇವೆಯಿಂದಲೇ ವಜಾ ಮಾಡಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಈಕೆಗೆ ನೀಡಿದ ಕಿರುಕುಳ ಹಾಗೂ ದೌರ್ಜನ್ಯವನ್ನು ಖಂಡಿಸಿ ಮತ್ತು ಇನ್ನು ಮುಂದೆ ಇನ್ಯಾವ ಮಹಿಳೆಗೂ ಈ ರೀತಿಯ ದೌರ್ಜನ್ಯ ನಡೆಯಬಾರದು ಎಂದು ಆಗ್ರಹಿಸಿ, ಈಗಾಗಲೇ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿ, ಮಕ್ಕಳ ಕಲ್ಯಾಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಕೂಡಾ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕಾಲೇಜು ಆಡಳಿತ ಮಂಡಳಿಯ ದುರ್ವರ್ತನೆಯ ವಿರುದ್ಧ ತನಿಖೆ ನಡೆಸಿ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ಜರುಗಿಸುವಂತೆಯೂ ಆಗ್ರಹಿಸಿದ್ದಾರೆ.
loading...

No comments