Breaking News

ದೌರ್ಜನ್ಯವೆಸಗಿದ ಆರೋಪ ಕೊಣಾಜೆ ಎಸ್ ಐ, ಪೇದೆ ಅಮಾನತು



ಮಂಗಳೂರು : ಅಂಗಡಿಯಲ್ಲಿದ್ದ ತರಕಾರಿಗಳನ್ನು ಹೊರಕ್ಕೆಸೆದಿರುವುದಲ್ಲದೇ ಅಂಗಡಿ ಮಾಲಕನಿಗೆ ಮಾನಸಿಕ ಹಿಂಸೆ ನೀಡಿ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಕೊಣಾಜೆ ಅಪರಾಧ ವಿಭಾಗದ ಉಪನಿರೀಕ್ಷಕಿ ಮತ್ತು ಪೊಲೀಸ್ ಪೇದೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಅಮಾನತು ಮಾಡಿದ್ದಾರೆ.

ಮುಡಿಪು ಪೇಟೆಯಲ್ಲಿದ್ದ ಪರಿಶಿಷ್ಟ ಜಾತಿ ಬೈರ ಸಮುದಾಯಕ್ಕೆ ಸೇರಿದ ಇರಾ ಮೂಳೂರು ನಿವಾಸಿ ರುಕ್ಮಯ್ಯ ಎಂಬವರ ಅಂಗಡಿಗೆ ಏಪ್ರಿಲ್ 6ರಂದು ಬಂದಿದ್ದ ಇವರಿಬ್ಬರೂ ದೌರ್ಜನ್ಯ ಎಸಗಿದ್ದರು ಎನ್ನಲಾಗಿತ್ತು.  ಬಳಿಕ ರುಕ್ಮಯ್ಯ ಅವರು ಕೊಣಾಜೆ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು.

ಉಪನಿರೀಕ್ಷಕಿ ಶ್ರೀಕಲಾ ಮತ್ತು ಪೇದೆ ರಾಜೇಶ್ ಸೇರಿಕೊಂಡು ದೌರ್ಜನ್ಯ ಎಸಗಿದ್ದರೆಂದು ರುಕ್ಮಯ್ಯ ನೀಡಿದ ದೂರಿನಂತೆ ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅಶೋಕ್ ಅವರು ಪೊಲೀಸ್ ಕಮೀಷನರ್ ಅವರಿಗೆ ಪ್ರಕರಣದ ವರದಿ ಸಲ್ಲಿಸಿದ್ದರು. ಅದರಂತೆ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮುಡಿಪು ಪೇಟೆಯಲ್ಲಿದ್ದ ಅಂಗಡಿಯೊಳಗೆ ನುಗ್ಗಿದ ಉಪನಿರೀಕ್ಷಕಿ ಶ್ರೀಕಲಾ ಮತ್ತು ಪೊಲೀಸ್ ಪೇದೆ ರಾಜೇಶ್ “ತರಕಾರಿ ಅಂಗಡಿಯಲ್ಲಿ ಸಿಗರೇಟು ಮಾರಾಟ ಮಾಡ್ತೀಯಾ, ಗಾಂಜಾ ಮಾರಾಟ ಮಾಡ್ತೀಯಾ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲರ್ ಹಿಡಿದು, ಪೊಲೀಸ್ ವಾಹನದಲ್ಲಿ ಬಲತ್ಕಾರವಾಗಿ ದಬ್ಬಿ ಕೊಣಾಜೆ ಠಾಣೆಗೆ ಎಳೆದುಕೊಂಡು ಹೋಗಿದ್ದರು.

“ಇಷ್ಟಕ್ಕೇ ಸುಮ್ಮನಾಗದ ಇಬ್ಬರೂ ತಮ್ಮ ಅಧಿಕಾರದ ಮದದಿಂದ ಪೇದೆ ರಾಜೇಶ್, ರುಕ್ಮಯ್ಯ ಅವರನ್ನು ಅರೆನಗ್ನಗೊಳಿಸಿ, ತಲೆಯನ್ನು ಗೋಡೆಗೆ ಗುದ್ದಿ  ಲಾಠಿಯಿಂದ ಗಾಯವಾಗುವ ರೀತಿ ಹೊಡೆದಿದ್ದಾರೆ. ವಿರುದ್ಧ ಗಾಂಜಾ ಮಾರಾಟ ಪ್ರಕರಣ ಫಿಕ್ಸ್ ಮಾಡುವುದಾಗಿ ಬೆದರಿಸಿದ್ದಾರೆ. ಜಾತಿಯ ವಿಚಾರವನ್ನು ಮುಂದಿಟ್ಟುಕೊಂಡು ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ನೀರು ಕೇಳಿದಾಗಲೂ ನೀಡಿಲ್ಲ. ನಿರಂತರ ಲಾಠಿಯಿಂದ ಹೊಡೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಮೂತ್ರ ಕುಡಿಸುವುದಾಗಿ ವ್ಯಂಗ್ಯವಾಡಿದ್ದಾರೆ” ಎಂದು ರುಕ್ಮಯ್ಯ ಅವರು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಗಾಯಗೊಂಡಿದ್ದ ಇವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಒತ್ತಾಯಪೂರ್ವಕವಾಗಿ ಪೊಲೀಸರಿಂದ ಯಾವುದೇ ರೀತಿಯ ದೌರ್ಜನ್ಯವಾಗಿಲ್ಲ ಎಂದು ಹಿಂಬರಹವನ್ನು ಪಡೆದುಕೊಂಡು ಬೆದರಿಕೆಯೊಡ್ಡಿದ್ದಾರೆ. ಹೀಗಾಗಿ ನಾನು ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಕಾಯಿತು” ಎಂದವರು ದೂರಿದ್ದರು.

ಎಎಸ್‍ಐ ಶ್ರೀಕಲಾ ಈ ಹಿಂದೆ ಪಾಂಡೇಶ್ವರ ಠಾಣೆಯಲ್ಲಿದ್ದ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಅಂದಿನ ಡಿಸಿಪಿ ಟಿ ಆರ್ ಜಗನ್ನಾಥ್ ಅವರು ಪದೇ ಪದೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
-karavali ale

loading...

No comments