ತಾಮ್ರದ ಪಾತ್ರೆಯಲ್ಲಿನ ನೀರಿನ ಬಗ್ಗೆ ನೀವು ತಿಳಿದು ಕೊಳ್ಳಬೇಕಾದ ವಿಷಯ
ಆಹಾರ, ಗಾಳಿಯಂತೆ, ನೀರೂ ಸಹ ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿದೆ. ದಿನದ ಆರಂಭ ಮತ್ತು ಅಂತ್ಯ ನೀರಿನ ಸೇವನೆಯಿಂದಾಗುತ್ತಿದೆ. ಜೀವಜಲ ಎಂದೇ ನಾವೆಲ್ಲ ನಂಬಿದ್ದು, ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದರಿಂದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದಾಗಿದೆ.
ಶುದ್ಧ ನೀರು ಎಂದಾಕ್ಷಣ, ಅಕ್ವಾಗಾರ್ಡ್, ಫಿಲ್ಟರ್, ಬಾಟಲಿ ನೀರು ಜ್ಞಾಪಕಕ್ಕೆ ಬರುವುದು ಸಹಜ. ಆದರೆ ಹಿಂದೆಲ್ಲಾ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಟ್ಟುಕೊಂಡು ಕುಡಿಯುತ್ತಿದ್ದರು. ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಹಿರಿಯರು ನಂಬಿದ್ದರು. ಈಗ ಅವು ನೇಪಥ್ಯಕ್ಕೆ ಸಂದಿವೆ.
ಅಲ್ಲದೆ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಕುಡಿಯುವ ಪದ್ಧತಿಯೂ ಜಾರಿಯಲ್ಲಿತ್ತು, ಎಲ್ಲರ ಮನೆಗಳಲ್ಲೂ ಇಂತಹ ವ್ಯವಸ್ಥೆ ಇರುವುದಿಲ್ಲ, ಇದ್ದರೆ ಒಳ್ಳೆಯದು.
ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಡುವ ನೀರನ್ನು ಕುಡಿದರೆ, ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡಲಿದೆ ಎಂಬುದನ್ನು ವಿಜ್ಞಾನ ಲೋಕವೇ ಹೇಳಿದೆ.
ಮಾತ್ರವಲ್ಲದೆ, ದೇಹದ ಆರೋಗ್ಯಕ್ಕೆ ಮಾರಕವಾಗುವಂತ ಅಂಶಗಳನ್ನು ನಿಯಂತ್ರಣದಲ್ಲಿಡಲಿದೆ. ತಾಮ್ರದಲ್ಲಿರುವ ಎಲೆಕ್ಟ್ರೋಲೈಟ್‌ಗಳು ನೀರು ಹಾಳಾಗುವುದನ್ನು ತಡೆಗಟ್ಟುತ್ತವೆ. ತಾಮ್ರದ ಪಾತ್ರೆಯಲ್ಲಿನ ನೀರಿನಲ್ಲಿ ತಾಜಾತನವಿರುತ್ತದೆ. ಈ ನೀರು ದೇಹಕ್ಕೆ ದಿವ್ಯಾಮೃತ ಎಂದು ಭಾವಿಸಲಾಗಿದೆ.
ನೀರನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ತಾಮ್ರ, ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿನ ನೀರು ನೈಸರ್ಗಿಕವಾಗಿ ಶುದ್ಧವಾಗಿರುತ್ತದೆ. ಅಲ್ಲದೆ, ಬ್ಯಾಕ್ಟೀರಿಯಾಗಳಿಂದಲೂ ಮುಕ್ತವಾಗಿರುತ್ತದೆ.
ಥೈರಾಯ್ಡ್ ಕಾರ್ಯ ವೈಖರಿಯನ್ನು ಸುಗಮಗೊಳಿಸುವ ಸಾಮರ್ಥ್ಯ ಹೊಂದಿರುವ ತಾಮ್ರವು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲಿದೆ.
ದಿನನಿತ್ಯ ತಾಮ್ರದ ಪಾತ್ರೆಯಲ್ಲಿನ ನೀರು ಕುಡಿಯುವುದರಿಂದ ಅರ್ಥರಿಟೀಸ್ ನೋವನ್ನು ಪರಿಹರಿಸಿ ಉರಿಯೂತದಂತಹ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ತಾಮ್ರದಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಸೋಂಕು ಉಂಟಾಗದಂತೆ ತಡೆಯುತ್ತವೆ. ಹೊಸ ಜೀವಕೋಶಗಳನ್ನು ಬೆಳೆಯಲು ಮತ್ತು ಗಾಯಗಳಾಗಿದ್ದರೆ ಅವುಗಳನ್ನು ಶೀಘ್ರ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ತಾಮ್ರದ ಪಾತ್ರೆ ನೀರು ಸಹಕಾರಿಯಾಗಿದೆ. ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ನೆರವಾಗುತ್ತದೆ.
ಆಯುರ್ವೇದ ತಜ್ಞರ ಅಭಿಪ್ರಾಯದಂತೆ ತಾಮ್ರದ ಪಾತ್ರೆಯಲ್ಲಿ ತುಂಬಿಡುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುವುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆಯನ್ನು ಪಡೆಯಬಹುದಾಗಿದೆ.
ತಾಮ್ರದ ಪಾತ್ರೆಯಲ್ಲಿನ ನೀರಿನ ಸೇವನೆಯಿಂದ ರಕ್ತಹೀನತೆ ಉಂಟಾಗುವುದನ್ನು ತಡೆಯಬಹುದಾಗಿದೆ. ತಾಮ್ರದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮುಖದ ಮೇಲೆ ಕಾಣುವ ಸುಕ್ಕುಗಳು, ಗೆರೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ.
loading...
No comments