Breaking News

ಮುಸ್ಲಿಂ ಕುಟುಂಬಗಳಿಗೆ ಸ್ವಧರ್ಮಿಯರಿಂದಲೇ ಬಹಿಷ್ಕಾರ



ಕಾರವಾರ : ಚಿತ್ತಾಕುಲದಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯದ 12 ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ವಿಷಯ ಬೆಳಕಿಗೆ ಬಂದಿದೆ.

ಈ ಮುಸ್ಲಿಮರು ಸೂಫಿ ಪಂಥದವರೆಂಬುದೇ ಅನ್ವರ್ ಮಹಮ್ಮದ್ ಸೇರಿದಂತೆ ಒಟ್ಟೂ 12 ಕುಟುಂಬಗಳನ್ನು ಮುಸ್ಲಿಂ ಸಮುದಾಯದ ಮುಖಂಡರು ಸಮಾಜದಿಂದ ಬಹಿಷ್ಕಾರ ಹಾಕಲು ಕಾರಣ. ಹಾಗಾಗಿ ಆ ಕುಟುಂಬಗಳು ಸಮಾಜದ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದ ದೂರ ಉಳಿಯುವಂತಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿರುವುದು ಬೇಸರದ ಸಂಗತಿಯಾಗಿದೆ.

ಬಹಿಷ್ಕಾರಕ್ಕೊಳಗಾದ ಈ ಕುಟುಂಬಗಳು ಆಂಧ್ರ ಮೂಲದ ದಾವರ್ ಅಲಿ ಶಾ ಎಂಬ ಗುರುವಿನ ಶಿಷ್ಯರಾದ ಮಾತ್ರಕ್ಕೆ ಕಳೆದ 25 ವರ್ಷದಿಂದ ಈ ಕುಟುಂಬಗಳನ್ನು ಮುಸ್ಲಿಂ ಸಮಾಜದಿಂದ ದೂರ ಇಟ್ಟಿದ್ದಾರೆ. ಈ ಕುಟುಂಬಗಳೊಡನೆ ಮಾತನಾಡುವುದಿಲ್ಲ. ಸಭೆ ಸಮಾರಂಭಕ್ಕೆ ಆಮಂತ್ರಿಸುವುದಿಲ್ಲ. ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಮುಸ್ಲಿಂ ಕೇರಿಯಲ್ಲಿರುವ ಬಾವಿಗಳಲ್ಲಿ ನೀರು ತುಂಬಲು ಸಹ ಈ ಕುಟುಂಬದ ಸದಸ್ಯರಿಗೆ ಅವಕಾಶ ನೀಡುವುದಿಲ್ಲ. ಅವರನ್ನು ಅಸ್ಪøಶ್ಯರಂತೆ ನಡೆಸಿಕೊಳ್ಳಲಾಗುತ್ತಿದೆ. ಕಳೆದ 25 ವರ್ಷದಿಂದ ಬಹಿಷ್ಕಾರಕ್ಕೊಳಗಾಗಿ ಮಾನಸಿಕವಾಗಿ ನರಕಯಾತನೆ ಅನುಭವಿಸುವಂತೆ ಮಾಡಲಾಗಿದೆ. ಇಂದಿನ ಆಧುನಿಕ ಸಮಾಜದಲ್ಲೂ ಇಂಥ ಬಹಿಷ್ಕಾರ ಹಾಕುವ ಇಂಥ ಅನಿಷ್ಠ ಪದ್ಧತಿ ಇದೆ ಎಂದರೆ ಮಾನವ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಹಿಷ್ಕಾರಕ್ಕೊಳಗಾದ ಕೌಸರ್ ಖಾನ್, “ನಾವ್ಯಾರಾದರೂ ವಿವಾಹ ಅಥವಾ ಇತರೆ ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡರೆ ಸಮಾಜದ ಮುಖಂಡರು ದೊಡ್ಡ ಅವಾಂತರವನ್ನೇ ಸೃಷ್ಟಿಸುತ್ತಾರೆ. ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಚಿಕ್ಕ ಪುಟಾಣಿಗಳು ಬಹಿಷ್ಕಾರ ಸಂಕೋಲೆಯಿಂದ ಬೇಸತ್ತಿದ್ದಾರೆ  ಪುಟಾಣಿ ಮಕ್ಕಳು ಸಹ ಗ್ರಾಮದ ಇತರ ಮಕ್ಕಳ ಜೊತೆ ಮಾತನಾಡುವಂತಿಲ್ಲ, ಆಟವಾಡುವಂತಿಲ್ಲ. ಕುಟುಂಬ ಬಹಿಷ್ಕಾರದ ಸಂಕೋಲೆಯಿಂದ ಈ ಜನರು ಮಾನಸಿಕವಾಗಿ ಕುಗ್ಗಿದ್ದಾರೆ . ಬಹಿಷ್ಕಾರಕ್ಕೊಳಗಾದ 12 ಕುಟುಂಬ 25 ವರ್ಷಗಳಿಂದ ನೊಂದು-ಬೆಂದು ಜಿಲ್ಲಾಡಳಿತದ  ಮೋರೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇವರು ಇನ್ನಷ್ಟು ಖಿನ್ನತೆಗೆ ಒಳಗಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು. ಹಾಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

loading...

No comments